ಕಲಬುರಗಿ: ಮದುವೆಯಾಗೋದಾಗಿ ಯುವತಿಯನ್ನು ನಂಬಿಸಿ, ಅತ್ಯಾಚಾರ ಎಸಗಿ, ಬಳಿಕ ಗರ್ಭಪಾತ ಮಾಡಿಸಿ, ಕೊನೆಗೆ ಪೊಲೀಸರ ಸಮ್ಮುಖದಲ್ಲಿ ಆಕೆಯನ್ನು ಮದುವೆಯಾದ ವ್ಯಕ್ತಿಯೊಬ್ಬ, ಇದೀಗ ಎಸ್ಕೇಪ್ ಆಗಿದ್ದಾನೆ. ಈಗ ಯುವತಿ ತನ್ನ ಗಂಡನನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಈ ಘಟನೆ ಕಲಬುರಗಿಯ ವಾಡಿ ಪಟ್ಟಣದಲ್ಲಿ ನಡೆದಿದೆ.
ಹೀಗೆ ಯುವತಿಗೆ ಮೋಸ ಮಾಡಿದ ಯುವಕನನ್ನು ವಿಶಾಲ ಚವ್ಹಾಣ ಎಂದು ಗುರುತಿಸಲಾಗಿದೆ. ಮೋಸ ಹೋದ ಹುಡುಗಿಯನ್ನು ರಾಧಾ(ಹೆಸರು ಬದಲಿಸಲಾಗಿದೆ) ಎಂದು ಗುರುತಿಸಲಾಗಿದೆ. ಇಬ್ಬರೂ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣಕ್ಕೆ ಸೇರಿದವರು. ಉನ್ನತ ವ್ಯಾಸಾಂಗಕ್ಕೆಂದು ತೆರಳಿದ್ದ ವಿಶಾಲ್ ಮತ್ತು ಯುವತಿ ನಡುವೆ ಬೆಂಗಳೂರಿನಲ್ಲಿ ಪ್ರೇಮಾಂಕುರವಾಗಿದೆ. ಮದುವೆಯಾಗೋದಾಗಿ ನಂಬಿಸಿದ ವಿಶಾಲ್, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡು ಬಾರಿ ಗರ್ಭ ಧರಿಸಿದ ಸಂದರ್ಭದಲ್ಲಿ ಟ್ಯಾಬ್ಲೆಟ್ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಇನ್ನೇನು ಆತ ಕೈ ಕೊಡುತ್ತಿದ್ದಾನೆ ಎಂಬ ಅನುಮಾನದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ, ವಾಡಿ ಪೊಲೀಸರು ವಿಶಾಲ್ ಹಾಗೂ ಯುವತಿಯ ಮದುವೆ ಮಾಡಿಸಿದ್ದಾರೆ.
ಮದುವೆಯಾದ ಕೂಡಲೇ ಮನೆ ನೋಡಿಕೊಂಡು ಬರೋದಾಗಿ ಎಸ್ಕೇಪ್ ಆದ ವಿಶಾಲ್ ಮತ್ತೆ ರಾಧಾಗೆ ಸಿಕ್ಕಿಲ್ಲ. ಮತ್ತೊಂದೆಡೆ ವಿಶಾಲ್ ಪೋಷಕರು ಶಿಲ್ಪ ಮತ್ತು ಅವರ ಪೋಷಕರಿಗೆ ಧಮ್ಕಿ ಹಾಕಿ, ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಗಂಡನನ್ನು ಹುಡುಕಿಕೊಡುವಂತೆ ಯುವತಿ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡೋ ಜೊತೆಗೆ, ಈಶಾನ್ಯ ವಲಯ ಐಜಿಪಿ ಅವರಿಗೂ ಯುವತಿ ಮನವಿ ಸಲ್ಲಿಸಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ವಿನಾಯಕ ಪಾಟೀಲ, ಯುವತಿ ದೂರು ನೀಡಿದ್ದಾಳೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಯುವಕನ ಪೋಷಕರು ಕಿರುಕುಳ ನೀಡುತ್ತಿರುವುದರ ಬಗ್ಗೆ ದೂರು ನೀಡಿದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ.