ಕಲಬುರಗಿ: ಕೊರೊನಾ ಎಫೆಕ್ಟ್ನಿಂದಾಗಿ ಭಿಕ್ಷಾಟನೆಗೂ ಬ್ರೇಕ್ ಬಿದ್ದಿದೆ. ಹಾಗಾಗಿ ಜಿಲ್ಲೆಯ ರಾವೂರ್ ವೃದ್ಧೆಯ ಕುಟುಂಬದ ಸ್ಥಿತಿ ಅತಂತ್ರವಾಗಿತ್ತು. ಈ ಕುಟುಂಬದ ದಯನೀಯ ಸ್ಥಿತಿ ಕುರಿತು ನಮ್ಮ ಈಟಿವಿ ಭಾರತನಲ್ಲಿ ವಿಸ್ತೃತ ವರದಿ ಬಿತ್ತರಿಸಲಾಗಿತ್ತು.
'ಕೊರೊನಾ ಎಫೆಕ್ಟ್: ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದ ವೃದ್ಧೆ ಬದುಕು ಅತಂತ್ರ' ಎಂಬ ಶೀರ್ಷಿಕೆಯಡಿ ಬಿತ್ತರಿಸಿದ್ದಕ್ಕೆ ವರದಿ ಸಾರ್ವಜನಿಕರ ಮನ ಮುಟ್ಟಿದೆ. ದಾನಿಗಳು ಬಡಪಾಯಿ ವೃದ್ಧೆಗೆ ಸಹಾಯಹಸ್ತ ಚಾಚಿದ್ದಾರೆ.
ಮಾರಕ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಬಸ್ ಹಾಗೂ ರೈಲು ಸಂಚಾರ ಸ್ಥಗಿತವಾದ ಹಿನ್ನೆಲೆ ಇವುಗಳನ್ನೇ ನಂಬಿಕೊಂಡು ಬದುಕುತ್ತಿದ್ದ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ನಿರ್ಗತಿಕ, ಅಸಹಾಯಕ ಭಿಕ್ಷುಕರ ಕುಟುಂಬಗಳು ಸಹ ತಿನ್ನಲು ಆಹಾರವಿಲ್ಲದೆ, ಕೈಯಲ್ಲಿ ಕಾಸು ಇಲ್ಲದೆ ಒಂದೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿವೆ.
ಜಿಲ್ಲೆಯ ರಾವೂರ್ ಗ್ರಾಮದ ಪ್ರದೇಶದ ನಿವಾಸಿಗಳಾದ ಸಿದ್ದಮ್ಮ ಹಾಗೂ ಆಕೆಯ ವಿಕಲಚೇತನ ಮಗ ರೈಲಿನಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದ್ರೆ ರೈಲು ಸಂಚಾರ ಬಂದ್ ಆದ ಪರಿಣಾಮ ಒಂದೊತ್ತಿನ ಉಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಅವರ ಸಂಕಷ್ಟಕ್ಕೆ ಜನರು ಸ್ಪಂದಿಸಿದ್ದಾರೆ.
ವರದಿಯನ್ನು ಗಮನಿಸಿದ ಅಧಿಕಾರಿಗಳು ಸಿದ್ದಮ್ಮನ ಮನೆಗೆ ಭೇಟಿ ನೀಡಿ ಅಕ್ಕಿ, ಗೋಧಿ, ಎಣ್ಣೆ, ಸಕ್ಕರೆ ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳನ್ನು ನೀಡಿದ್ದಾರೆ. ರಾವೂರ ಗ್ರಾಮ ಪಂಚಾಯತ್ ಅಧ್ಯಕ್ಷರು ವೈಯಕ್ತಿಕವಾಗಿ ದಿನ ಬಳಕೆ ವಸ್ತುಗಳು, ಕೈಗೆ ಒಂದಿಷ್ಟು ಹಣವನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಎಫೆಕ್ಟ್: ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದ ವೃದ್ಧೆ ಬದುಕು ಅತಂತ್ರ
ಸಾರ್ವಜನಿಕರಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳು ಕೂಡ ಸಹಾಯ ಮಾಡುತ್ತಿದ್ದಾರೆ. ತುತ್ತು ಅನ್ನಕ್ಕೆ ಪರದಾಡುತ್ತಿದ್ದ ಕುಟುಂಬಕ್ಕೆ ಈಟಿವಿ ಭಾರತ ವರದಿ ಆಸರೆಯಾಗಿದೆ. ನಾಳೆ ರೇಷನ್ ಕಾರ್ಡ ರಹಿತ ಕುಟುಂಬಗಳಿಗೆ ನೀಡುವ ದಿನಸಿ ಕಿಟ್ ಹಾಗೂ ನ್ಯಾಯಬೆಲೆ ಅಂಗಡಿಯಿಂದ ಹೆಚ್ಚಿನ ದವಸಧಾನ್ಯಗಳನ್ನು ಈ ಕುಟುಂಬಕ್ಕೆ ನೀಡುವುದಾಗಿ ರಾವೂರ್ ಪಿಡಿಓ ಕಾವೇರಿ ರಾಠೋಡ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಒಟ್ಟಾರೆ, ಕೊರೊನಾ ಕರಿ ನೆರಳಿನಿಂದ ತುತ್ತು ಅನ್ನ ಸಿಗದೆ ಜೀವನದ ಪಯಣವೇ ಮುಗಿಯಿತು ಎಂದು ಕಣ್ಣೀರು ಹಾಕುತ್ತಿದ್ದ ಕುಟುಂಬಕ್ಕೆ ಈಟಿವಿ ಭಾರತ ಹೊಸ ಬೆಳಕು ಮೂಡಿಸಿದೆ. ನೊಂದ ಸಿದ್ದಮ್ಮ ಈಟಿವಿ ಭಾರತಕ್ಕೆ ಮುಕ್ತ ಮನಸ್ಸಿನಿಂದ ಧನ್ಯವಾದ ತಿಳಿಸಿದ್ದಾರೆ. ಸಾರ್ವಜನಿಕರಿಂದಲೂ ಈಟಿವಿ ಭಾರತ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವೃದ್ಧೆಯ ಸಂಕಷ್ಟಕ್ಕೆ ಸ್ಪಂದಿಸಿ ನೆರವಾಗಿರುವ ಅಧಿಕಾರಿಗಳು ಮತ್ತು ದಾನಿಗಳಿಗೆ ಈಟಿವಿ ಭಾರತನಿಂದ ಧನ್ಯವಾದ ತಿಳಿಸುತ್ತೇವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರ್ಗತಿಕರ ನೆರವಿಗೆ ನಿಲ್ಲುವ ಜನರು ಮತ್ತು ಅಧಿಕಾರಿಗಳ ಕಾರ್ಯ ಶ್ಲಾಘನೀಯ.