ಕಲಬುರಗಿ: ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಭೂಕುಸಿತ, ಪ್ರವಾಹಕ್ಕೆ ಸಿಲುಕಿ ಹಲವರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಪ್ರವಾಸಕ್ಕೆಂದು ದೇವಭೂಮಿಗೆ ತೆರಳಿದ್ದ ಜಿಲ್ಲೆಯ 9 ಜನರು ಸುರಕ್ಷಿತವಾಗಿ ತವರಿನತ್ತ ಮರಳುತ್ತಿದ್ದಾರೆ.
ಕೇದಾರನಾಥ ದರ್ಶನಕ್ಕೆ ತೆರಳಿದ್ದ ಕಲಬುರಗಿ ಮೂಲದ 9 ಜನ ಯಾತ್ರಾರ್ಥಿಗಳು ಸುರಕ್ಷಿತವಾಗಿ ವಾಪಸ್ ಆಗುತ್ತಿದ್ದಾರೆ. ಆಳಂದ ತಾಲೂಕಿನ ಭೂಸನೂರ ಗ್ರಾಮದ ಚಿದಾನಂದ ಸ್ವಾಮಿ, ಲಕ್ಷ್ಮೀಕಾಂತ ಪಾಟೀಲ್, ಅನಂತರಾಜ ಜಗತಿ, ನಾಗರಾಜ ಜಗತಿ, ಲಕ್ಷ್ಮೀಪುತ್ರ, ಕಿಟ್ಟು ಗೌಡಪ್ಪಗೋಳ, ವೈಜನಾಥ, ವೀರೆಶ್ ಪಾಟೀಲ್, ಮಹಾದೇವ ಪಟ್ಟಣೆ ಸೇರಿ 9 ಜನರು ಉತ್ತರಾಖಂಡದ ಗೌರಿಕುಂಡದಲ್ಲಿ ಸಿಲುಕಿದ್ದರು.
ಇದೀಗ ರಾಜ್ಯ ಸರ್ಕಾರದ ಸಹಾಯದೊಂದಿಗೆ ತವರಿಗೆ ಮರಳುತ್ತಿದ್ದಾರೆ. ಹರಿದ್ವಾರದಿಂದ ರೈಲಿನ ಮೂಲಕ ಕಲಬುರಗಿಗೆ ಆಗಮಿಸುತ್ತಿರುವ ಯಾತ್ರಾರ್ಥಿಗಳು ವಾರದ ಹಿಂದೆ ಕೇದಾರನಾಥಕ್ಕೆ ತೆರಳಿದ್ದರು. ಉತ್ತರಾಖಂಡದಲ್ಲಿ ಉಂಟಾದ ಮೇಘ ಸ್ಪೋಟದಿಂದ ಎರಡು ದಿನ ಗೌರಿ ಕುಂಡದಲ್ಲಿ ಇವರು ಪರದಾಡುವಂತಾಗಿತ್ತು. ಕೊನೆಗೂ ಸರ್ಕಾರದ ನೆರವಿನೊಂದಿಗೆ ತಮ್ಮ ಹುಟ್ಟೂರಿನತ್ತ ಬರುತ್ತಿದ್ದಾರೆ.
ಇದನ್ನೂ ಓದಿ: ಯುವತಿಯ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಕಿರಿಕ್; ಯುವಕನಿಗೆ ಚಾಕುವಿನಿಂದ ಇರಿತ