ಕಲಬುರಗಿ: ಚಿತ್ರ ಕಲಾಸಕ್ತರಿಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯ, ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಕಲಾ ಸಂಸ್ಥೆ ಇನ್ನಿತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಲಬುರಗಿಯ ಕನ್ನಡ ಭವನದಲ್ಲಿ 8ನೇ ಚಿತ್ರಸಂತೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ.ಡಿ ಉದ್ಘಾಟಿಸಿದರು. ಬಳಿಕ ಚಿತ್ರಸಂತೆಯಲ್ಲಿ ಚಿತ್ರಕಲೆಗಳ ಪ್ರದರ್ಶನ-ಮಾರಾಟ ಹಾಗೂ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಕ್ಕಳು ಆಗಮಿಸಿ ಚಿತ್ರಸಂತೆಯಲ್ಲಿ ಪಾಲ್ಗೊಂಡು ಸ್ಪರ್ಧೆಯಲ್ಲಿ ತಮಗಿಷ್ಟವಾದ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಲಬುರಗಿಯಲ್ಲಿ ಆಯೋಜಿಸಲಾದ ಚಿತ್ರಸಂತೆ ಒಂದು ರೀತಿಯ ವರ್ಣರಂಜಿತವಾಗಿತ್ತು. ನಗರದ ವಿವಿಧೆಡೆಗಳಿಂದ ಸಾರ್ವಜನಿಕರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಚಿತ್ರಸಂತೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರ ಸಂತೆಯಲ್ಲಿ ಛಾಯಾಚಿತ್ರ, ರೇಖಾಚಿತ್ರ ಸೇರಿದಂತೆ ವಿವಿಧ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಯುವತಿಯರು, ಮಕ್ಕಳು ಸೇರಿದಂತೆ ಕೆಲವರು ಕುಟುಂಬದೊಂದಿಗೆ ಆಗಮಿಸಿ ಆನಂದಿಸಿದರು.
ಇದನ್ನೂ ಓದಿ: ಬೆಣ್ಣೆನಗರಿಯಲ್ಲಿ ತಡವಾಗಿ ತೆರೆದ ಖಾಸಗಿ ಶಾಲೆ; ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳ ಹೆಜ್ಜೆ
ಕಲಬುರಗಿಯ ಕನ್ನಡ ಭವನದಲ್ಲಿ ಒಂದು ರೀತಿಯ ಹಬ್ಬದ ವಾತಾವಾರಣವೇ ನಿರ್ಮಾಣವಾಗಿತ್ತು. ಚಿತ್ರ ಸಂತೆ ಜೊತೆಗೆ ಶಾಲಾ-ಕಾಲೇಜು ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು. ಕನ್ನಡ ಭವನದಲ್ಲಿ ಚಿತ್ರಕಲಾ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ರಾಜ್ಯ ಮತ್ತು ನೆರೆ ರಾಜ್ಯಗಳ ಕಲಾವಿದರಿಂದ 150ಕ್ಕೂ ಹೆಚ್ಚು ಅಧಿಕ ಮಳಿಗೆಗಳನ್ನು ಹಾಕಲಾಗಿತ್ತು. ಚಿತ್ರಸಂತೆಗೆ ಆಗಮಿಸಿದ್ದ ಸಾರ್ವಜನಿಕರು ಮಾರಾಟಕ್ಕಿಡಲಾಗಿದ್ದ ಚಿತ್ರಗಳಲ್ಲಿ ತಮಗಿಷ್ಟವಾದ ಚಿತ್ರವನ್ನು ಖರೀದಿಸಿ ಕೊಂಡೊಯ್ದರು.