ಕಲಬುರಗಿ: ಶಿವರಾತ್ರಿಯಂದು ಶಿವನ ದರ್ಶನಕ್ಕೆ ಬರೋರಿಗೆ ಕಲಬುರಗಿಯ ವಿವಿಧ ರೀತಿಯ ಶಿವಲಿಂಗಗಳು ಕಾಣಲು ಸಿಗಲಿದೆ. ಶಿವರಾತ್ರಿ ಆಚರಣೆ ನಿಮಿತ್ತವಾಗಿ ಬಿಸಿಲೂರು ಕಲಬುರಗಿಯಲ್ಲಿ ವಿಶಿಷ್ಟವಾಗಿ ತಯಾರಿ ನಡೆದಿದೆ. ಬ್ರಹ್ಮಕುಮಾರಿ ಆಶ್ರಮದಲ್ಲಿ ಮಹಾ ಶಿವರಾತ್ರಿಗಾಗಿ 31 ಅಡಿ ಎತ್ತರದ ಮುತ್ತಿನ ಶಿವಲಿಂಗ ಸ್ಥಾಪಿಸಲಾಗಿದೆ.
ಆಂಧ್ರ, ರಾಯಚೂರಿನ ದೇವದುರ್ಗ ಮತ್ತು ಮೌಂಟ್ ಅಬುದಿಂದ 1ಲಕ್ಷ 20 ಸಾವಿರ ಮುತ್ತುಗಳನ್ನು ತರಿಸಿ ಶಿವಲಿಂಗಕ್ಕೆ ಪೋಣಿಸಿ ಅಲಂಕರಿಸಲಾಗಿದೆ. ಕಳೆದ 4 ವರ್ಷಗಳಿಂದ ಬ್ರಹ್ಮಕುಮಾರಿ ಆಶ್ರಮದಲ್ಲಿ ಮಹಾ ಶಿವರಾತ್ರಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸುತ್ತ ಬರಲಾಗುತ್ತಿದೆ.
12 ಜ್ಯೋತಿರ್ಲಿಂಗಗಳಿಗೆ ವಿವಿಧ ಸಿರಿಧಾನ್ಯಗಳಿಂದ ಅಲಂಕಾರ
ಇನ್ನು ಗ್ರೀನೇಶ್ವರ, ಭೀಮಾಶಂಕರ, ಮಲ್ಲಿಕಾರ್ಜುನ, ಕೇದಾರನಾಥ, ನಾಗೇಶ್ವರ, ವಿಶ್ವನಾಥ, ವೈದ್ಯನಾಥ ಹೀಗೆ ದೇಶದ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಬ್ರಹ್ಮಕುಮಾರಿ ಆಶ್ರಮದಲ್ಲಿ ಸ್ಥಾಪಿಸಲಾಗಿರುವ 12 ಜ್ಯೋತಿರ್ಲಿಂಗಗಳಿಗೆ ಮಹಾಶಿವರಾತ್ರಿ ನಿಮಿತ್ತ ಅಲಂಕರಿಸಲಾಗಿದೆ. ರುದ್ರಾಕ್ಷಿ, ಕಡಲೆ ಪುರಿ, ಹಣ, ಡ್ರೈಫ್ರುಟ್ಸ್, ಜೋಳದ ಕಾಳು-ತೆನೆ, ಹೂವು, ನವಿಲು ಗರಿ ಬಳಸಿಕೊಂಡು 12 ಜ್ಯೋತಿರ್ಲಿಂಗಗಳಿಗೆ ಆಕರ್ಷಕವಾಗಿ ಅಲಂಕಾರ ಮಾಡಲಾಗಿದೆ
ದಿನವಿಡೀ ವಿಶೇಷ ಪೂಜೆ
ಮಹಾಶಿವರಾತ್ರಿಯಂದು ಬೆಳಗ್ಗೆಯಿಂದಲೇ ಶಿವಲಿಂಗಕ್ಕೆ ವಿಶೇಷ ಪೂಜೆ ಜರುಗಲಿವೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಪಕ್ಕದ ಆಂಧ್ರ, ಇತರ ತೆಲಂಗಾಣದಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಜ್ಯೋತಿರ್ಲಿಂಗ, ಮುತ್ತಿನ ಶಿವಲಿಂಗದ ದರ್ಶನ ಪಡೆದು ಶಿವಭಕ್ತಿಗೆ ಪಾತ್ರರಾಗಲಿದ್ದಾರೆ. ಶಿವರಾತ್ರಿ ಪ್ರಯುಕ್ತ ಸಂಜೆ ಆಶ್ರಮದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.