ಕಲಬುರಗಿ: ಜಿಲ್ಲೆಯ ಮಾಶಾಳ ಗ್ರಾಮದಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಿಂದ ರಾಜ್ಯಕ್ಕೆ ಪ್ರವೇಶಿಸಲು ಮುಂದಾಗಿದ್ದ 29 ಕಾರ್ಮಿಕರನ್ನು ಸ್ಥಳೀಯ ಪೊಲೀಸರು ತಡೆದು ಅವರನ್ನು ಮಹಾರಾಷ್ಟ್ರ ಪೊಲೀಸರಿಗೆ ಒಪ್ಪಿಸುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆಗೆ ಕೂಲಿ ಕೆಲಸಕ್ಕಾಗಿ ತೆರಳಿದ್ದ ಅಫಜಲಪುರ ತಾಲೂಕಿನ ಬನಹಟ್ಟಿಯ 4 ಜನ ಕಾರ್ಮಿಕರು ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ 25 ಜನ ಕಾರ್ಮಿಕರು ಗುವಾರ ಮಶಾಳ ಗ್ರಾಮಕ್ಕೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ಕಂಡು ಬಂದಿದ್ದರು. ಹೊಲದಲ್ಲಿ ಜನ ಗುಂಪಾಗಿ ನಡೆದುಕೊಂಡು ಹೋಗುತ್ತಿದ್ದದ್ದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಫಜಲಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ವಿಚಾರಣೆ ನಡೆಸಿದರು. ಯಾವುದೇ ಕಾರಣಕ್ಕೂ ಅವರನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಅಕ್ಕಲಕೋಟ ಅಥವಾ ದುಧನಿಯಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಇಡಲು ಸೂಚಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆಗೆ ಕೂಲಿ ಕೆಲಸಕ್ಕಾಗಿ ತೆರಳಿದ್ದೆವು. ಕೊರೊನಾ ಕಾರಣಕ್ಕೆ ಅಲ್ಲಿ ಕೆಲಸ ನಿಂತು ಹೋಗಿದ್ದು, ಜೀವನ ನಡೆಸುವುದು ಕಷ್ಟವಾದ ಹಿನ್ನೆಲೆಯಲ್ಲಿ ವಾಪಸ್ ಊರಿಗೆ ಮರಳುತ್ತಿದ್ದೆವು. ಪುನಾದಿಂದ ಹಣ್ಣು, ತರಕಾರಿ ವಾಹನ ಹಿಡಿದು ಇಲ್ಲಿಯವರೆಗೆ ಬಂದಿದ್ದೇವೆ. ಅಕ್ಕಲಕೋಟೆಯಿಂದ ಇಲ್ಲಿಯವರೆಗೆ ನಡೆದುಕೊಂಡು ಬಂದಿದ್ದೇವೆ. ಯಾರಿಗೂ ತೊಂದರೆಯಾಗಬಾರದು ಎಂದು ಹೊಲಗಳಲ್ಲಿ ನಡೆದುಕೊಂಡು ಬಂದಿದ್ದು, ನಾವು ಊರಿಗೆ ತೆರಳಬೇಕು ಎಂದು ಕಾರ್ಮಿಕರು ಹೇಳಿದ್ದಾರೆ.