ಸೇಡಂ(ಕಲಬುರಗಿ): ಒಂದೆಡೆ ಆಕ್ಸಿಜನ್ ಕೊರತೆ, ಇನ್ನೊಂದೆಡೆ ಔಷಧಗಳ ಅಲಭ್ಯತೆ. ಇವುಗಳ ಮಧ್ಯೆ ಇಹಲೋಕ ತ್ಯಜಿಸಿದ ಜೀವಗಳೆಷ್ಟೋ ಲೆಕ್ಕವಿಲ್ಲ. ಜನತಾ ಕರ್ಪ್ಯೂ ಹೇರಿಕೆಯಿಂದ ಖಾಸಗಿ ವಾಹನಗಳ ಓಡಾಟಕ್ಕೂ ಬ್ರೇಕ್ ಬಿದ್ದಿದೆ.
ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕಿತರು ಆಸ್ಪತ್ರೆಗಳಿಗೆ ತಲುಪಬೇಕಾದರೆ ನರಕಯಾತನೆ ಅನುಭವಿಸುವಂತಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ಒಂದೆರಡು ಆ್ಯಂಬುಲೆನ್ಸ್ಗಳು ರೋಗಿಗಳಿಗಿಂತ ಆಕ್ಸಿಜನ್ ಸಿಲಿಂಡರ್ ತರುವಲ್ಲಿ ಬ್ಯುಸಿಯಾಗಿವೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಯುವ ಉದ್ಯಮಿ ಸೇಡಂ ಜನತೆಯ ನೆರವಿಗೆ ಮುಂದಾಗಿದ್ದಾರೆ.
ಕೊರೊನಾ ರೋಗಿಗಳಿಗೆ ಆ್ಯಂಬುಲೆನ್ಸ್ ಕೊರತೆಯನ್ನು ಮನಗಂಡ ಉದ್ಯಮಿ ಹಾಗೂ ಇತ್ತೀಚೆಗೆ ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಮುಖಂಡ ಬಾಲರಾಜ ಗುತ್ತೇದಾರ ಅವರು ಎರಡು ಉಚಿತ 24/7 ಆ್ಯಂಬುಲೆನ್ಸ್ ಸೇವೆ ಪ್ರಾರಂಭಿಸಲು ಮುಂದಾಗಿದ್ದಾರೆ. ಈಗಾಗಲೇ ಆ್ಯಂಬುಲೆನ್ಸ್ಗಳನ್ನು ಖರೀದಿಸಿರುವ ಅವರು ಸೇಡಂ ಜನತೆಗೆ ಅರ್ಪಿಸುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಹಾಯ ಹಸ್ತ ಚಾಚಿರುವ ಬಾಲರಾಜ ಗುತ್ತೇದಾರ ಅವರ ಈ ಸೇವೆ ಜನಮೆಚ್ಚುಗೆಗೆ ಪಾತ್ರವಾಗಿದೆ.