ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 33 ಜನರಿಗೆ ಸೋಂಕು ತಗುಲಿದ್ದರೇ ಇಬ್ಬರು ವೈರಸ್ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಶೀತ ಹಾಗೂ ಜ್ವರ ಹೊಂದಿದ್ದ 72 ವರ್ಷದ ವೃದ್ಧ (ಪಿ-9,833) ಜೂ. 23ರಂದು ಆಸ್ಪತ್ರೆಗೆ ದಾಖಲಾಗಿ ನಿನ್ನೆ (ಜೂ.26) ಮೃತಪಟ್ಟಿದ್ದರು. ಇವರಿಗೆ ಸೋಂಕು ತಗುಲಿತ್ತು ಎಂದು ಆರೋಗ್ಯ ಇಲಾಖೆಯ ವರದಿ ದೃಢಪಡಿಸಿದೆ. ಸದ್ಯ ಇವರ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ.
ಜೂ.25ರಂದು ತೀವ್ರ ಉಸಿರಾಟ ಸಮಸ್ಯೆಯಿಂದ (ಸಾರಿ) ಆಸ್ಪತ್ರೆಗೆ ದಾಖಲಾಗಿದ್ದ 55 ವರ್ಷದ ವ್ಯಕ್ತಿ (ಪಿ-11278) ಸಹ ನಿನ್ನೆ ಸಾವನ್ನಪ್ಪಿದ್ದರು.
ಇಂದು 4 ವರ್ಷದ ಮಗು ಸೇರಿ ಜಿಲ್ಲೆಯಲ್ಲಿ ಮತ್ತೆ 33 ಜನರಲ್ಲಿ ಸೋಂಕು ಪತ್ತೆಯಾಗಿದೆ. 24 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,364ಕ್ಕೆ ಏರಿಕೆಯಾಗಿದ್ದು, 17 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ 388 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.