ಕಲಬುರಗಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಒಂದೇ ಪರೀಕ್ಷಾ ಕೇಂದ್ರದ ಮುಖ್ಯ ಶಿಕ್ಷಕ, ಕಸ್ಟೋಡಿಯನ್ ಸೇರಿ 16 ಜನರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಅಪರ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಾಧಿಕಾರಿಗಳು ಆಗಿರುವ ಆನಂದ ಪ್ರಕಾಶ ಮೀನಾ ಅವರು ಆದೇಶ ಹೊರಡಿಸಿದ್ದಾರೆ.
ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವಾಗ ಸಾಮೂಹಿಕ ನಕಲು ಮಾಡಲು ಸಹಕರಿಸಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಗೊಬ್ಬೂರ (ಬಿ) ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಗೊಲ್ಲಾಳಪ್ಪ, ಕಸ್ಟೋಡಿಯನ್ ಭೀಮಾಶಂಕರ, ಅರುಣ ಕುಮಾರ್, ಬಿದನೂರ ಶಾಲೆಯ ಶಿಕ್ಷಕ ರವೀಂದ್ರ, ಬಂದರವಾಡ ಸರ್ಕಾರಿ ಶಾಲೆಯ ಶಿಕ್ಷಕ ದೇವೀಂದ್ರಪ್ಪ ಯರಗಲ್, ಸವಿತಾಬಾಯಿ ಜಮಾದಾರ್, ಕೋಗನೂರು ಮೋರಾರ್ಜಿ ವಸತಿ ಶಾಲೆಯ ಶಿಕ್ಷಕರಾದ ಅನಿತಾ, ನಾಗಮ್ಮ, ರೇವಣಸಿದ್ದಪ್ಪ, ಚೌಡಾಪೂರ ಕಿತ್ತೂರರಾಣಿ ಚೆನ್ನಮ್ಮ ಶಾಲೆ ಶಿಕ್ಷಕಿ ಪರ್ವಿನ್ ಸುಲ್ತಾನಾ, ಹಾವನೂರು ಶಾಲೆ ಶಿಕ್ಷಕ ಬಾಬೂ ಪವಾರ್, ಹಸರಗುಂಡಗಿ ಶಾಲೆಯ ಕವಿತಾ ಡಿ, ಗಾಯತ್ರಿ ಬಿರಾದಾರ್, ಬಿದನೂರ್ ಮಾಧ್ಯಮಿಕ ಶಾಲೆಯ ಜಯಶ್ರೀ ಶೇರಿ, ವಿದ್ಯಾವತಿ, ಮೀನಾಕ್ಷಿ ದುಧನಿಕರ್ ಸೇವೆಯಿಂದ ಅಮಾನತು ಮಾಡಲಾಗಿದೆ.
![Ordercopy](https://etvbharatimages.akamaized.net/etvbharat/prod-images/kn-klb-01-sslc-exam-16-suspend-ka10050_06042023110544_0604f_1680759344_619.jpg)
ಇದನ್ನೂ ಓದಿ: ಸರ್ಕಾರಿ ಐಟಿಐ ಕಾಲೇಜು ಪರೀಕ್ಷೆಯಲ್ಲಿ ಮಾಸ್ ಕಾಪಿ: ಉಪನ್ಯಾಸಕಿಗೆ ಕೊಲೆ ಬೆದರಿಕೆ- ವಿಡಿಯೋ ವೈರಲ್
ಗೊಬ್ಬೂರ (ಬಿ) ಸರ್ಕಾರಿ ಪ್ರೌಢ ಶಾಲೆಯಲ್ಲಿ ಏ.3 ರಂದು ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವಾಗ ಬಂದೋಬಸ್ತ್ ಪರಿಶೀಲನೆಗೆಂದು ಕಲಬುರಗಿ ಎಸ್ಪಿ ಇಶಾ ಪಂತ್ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಸಾಮೂಹಿಕ ನಕಲು ಬೆಳಕಿಗೆ ಬಂದಿತ್ತು. ಪರೀಕ್ಷಾ ಕೇಂದ್ರದ ಕಿಟಕಿಗಳಲ್ಲೆಲ್ಲಾ ಮೈಕ್ರೋ ಝರಾಕ್ಸ್, ಗೈಡ್, ಪುಸ್ತಕಗಳ ರಾಶಿಗಳು ಕಂಡು ಬಂದಿದ್ದವು. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಾಜ್ಞೆ ಇದ್ದರೂ ಸಾಕಷ್ಟು ಜನ ಎಂದಿನಂತೆ ಓಡಾಡಿಕೊಂಡಿದ್ದದ್ದನ್ನು ಗಮನಿಸಿದ್ದರು. ತಕ್ಷಣವೇ ಪರೀಕ್ಷಾ ಕೇಂದ್ರದ ಉಸ್ತುವಾರಿ ಹೊಣೆ ಹೊತ್ತವರಿಗೆ ಕರೆದು ಎಚ್ಚರಿಕೆ ಸಹ ನೀಡಿದ್ದಲ್ಲದೆ, ನಿಷೇಧಾಜ್ಞೆ ಉಲ್ಲಂಘಿಸಿದ ಹಲವರನ್ನು ವಶಕ್ಕೆ ಪಡೆಯಲಾಗಿತ್ತು. ಇದಾದ ನಂತರ ಪರೀಕ್ಷಾ ಕೇಂದ್ರದ ಸುತ್ತಮುತ್ತ ಝರಾಕ್ಸ್ ಬುಕ್‌ಗಳು, ಮೈಕ್ರೋ ಝರಾಕ್ಸ್ ಚೀಟಿಗಳ ರಾಶಿ ಕಂಡು ಬಂದಾಗ ಕೇಂದ್ರದೊಳಗೆ ಸಾಮೂಹಿಕ ನಕಲು ನಡೆದಿರೋದು ಗೊತ್ತಾಗಿ ಸಂಪೂರ್ಣ ಪರಿಶೀಲನೆ ನಡೆಸಿದ್ದರು. ವಿಡಿಯೋ, ಪೊಟೋ ಸೇರಿ ಇತರೆ ಸಾಕ್ಷ್ಯಗಳ ಸಮೇತ ಜಿಲ್ಲಾ ಮಟ್ಟದ ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಿದ್ದರು.
ಇದನ್ನೂ ಓದಿ: ಪರೀಕ್ಷೆಯಲ್ಲಿ ಸಾಮೂಹಿಕ ನಕಲು: ವಿಷಯ ಒಂದಕ್ಕೆ 10 ಸಾವಿರ ವಸೂಲಿ ಆರೋಪ
ಎಸ್ಪಿ ಇಶಾ ಪಂತ್ ಅವರ ವರದಿ ಆಧಾರದ ಮೇಲೆ ಅಫಜಲಪುರ ಬಿಇಒ ಅವರಿಗೆ ವಿಸ್ತೃತ ವರದಿ ಕೇಳಲಾಗಿತ್ತು. ಬಿಇಒ ಕೂಡ ಸಾಮೂಹಿಕ ನಕಲು ನಡೆದಿರೋದಕ್ಕೆ ಸಾಕ್ಷ್ಯಗಳಿರೋದನ್ನು ಪತ್ತೆಹಚ್ಚಿ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಎರಡು ವರದಿಗಳನ್ನು ಆಧರಿಸಿ ಅಂದು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಪರೀಕ್ಷಾ ಅಧೀಕ್ಷಕರು, ಕಸ್ಟೋಡಿಯನ್, ಜಾಗೃತ ದಳ, ಮೇಲ್ವಿಚಾರಕರು ಸೇರಿದಂತೆ 16 ಜನ ಶಿಕ್ಷಕರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಅಪರ ಆಯುಕ್ತ ಆನಂದ ಪ್ರಕಾಶ ಮೀನಾ ಆದೇಶ ಹೊರಡಿಸಿದ್ದಾರೆ.