ರಾಣೆಬೆನ್ನೂರು (ಹಾವೇರಿ): ಸತತ ಮಳೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿರುವ ರೈತರಿಗೆ ಬೆಳೆ ಪರಿಹಾರ, ಬೆಳೆ ವಿಮೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಳೆದು ಕೊಂಡವರಿಗೆ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಜಿ.ಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ ಭರವಸೆ ನೀಡಿದ್ದಾರೆ.
ರಾಣೆಬೆನ್ನೂರು ನಗರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು, ಎಲ್ಲ ಪಕ್ಷದ ಮುಖಂಡರು, ಜಿಲ್ಲಾ ಪಂಚಾಯಿತಿಯ ಎಲ್ಲ ಸದಸ್ಯರು ಮತ್ತು ಶಾಸಕರು, ಜಿಲ್ಲೆಯ ಮಂತ್ರಿಗಳ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಭೇದ ಮರೆತು ಸಿಕ್ಕಿರುವ 6 ತಿಂಗಳ ಅವಧಿಯಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ರೈತ ಕುಟುಂಬದಿಂದ ಬಂದವ, ರೈತರ ಕಷ್ಟ ನಷ್ಟ ತಿಳಿದಿದ್ದೇನೆ. ರೈತರ ಹಿತ ಬಹಳ ಮುಖ್ಯ ಎಂದರು.
ಮಳೆಗೆ ಭಾಗಶಃ ಹಾನಿಯಾದ ಮನೆಗೆ ರೂ.10 ಸಾವಿರದಿಂದ 50 ಸಾವಿರದ ವರೆಗೆ ಸರ್ಕಾರ ಪರಿಹಾರ ನೀಡಿದೆ. ಮತ್ತೆ ಮಳೆಗೆ ಅದೇ ಮನೆಗಳು ಸಂಪೂರ್ಣ ಬಿದ್ದು ಹೋಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ಒಂದು ಸಲ ಪರಿಹಾರ ನೀಡಿದವರೆಗೆ ಮತ್ತೆ ಪರಿಹಾರ ಕೊಡಲು ಬರುವುದಿಲ್ಲ ಅಂತಾ ತಿಳಿಸಿದ್ದಾರೆ. ಈ ತಾಂತ್ರಿಕ ಸಮಸ್ಯೆಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷನನ್ನಾಗಿ ಅವಿರೋಧ ಆಯ್ಕೆ ಮಾಡಲು ಶ್ರಮಿಸಿದ ನನ್ನ ಕಾಕೋಳ ಕ್ಷೇತ್ರದ ಮತದಾರರು, ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.