ಹಾವೇರಿ: ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದೆ. ದೇವೇಂದ್ರಗೌಡ ಮಂಡಗಟ್ಟಿ (30) ಹಲ್ಲೆಗೊಳಗಾದ ಯುವಕ. ನಿಶ್ಚಿತಾರ್ಥ ಆದ ಅಪ್ರಾಪ್ತೆಯು ಬೇರೆ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಈಗಷ್ಟೇ ಪಿಯುಸಿ ಪ್ರಥಮ ವರ್ಷದ ಪರೀಕ್ಷೆ ಬರೆದಿದ್ದ ರಾಣೆಬೆನ್ನೂರು ತಾಲೂಕಿನ ಗ್ರಾಮವೊಂದರ ಬಾಲಕಿಗೆ ದೇವೇಂದ್ರಗೌಡನ ಜೊತೆಗೆ ವಿವಾಹ ನಿಶ್ಚಿತಾರ್ಥ ಮಾಡಲಾಗಿತ್ತು. ಆದರೆ ಏಪ್ರಿಲ್ 6 ರಂದು ಆಕೆಯ ಜನ್ಮದಿನಕ್ಕೆಂದು ಹೊಸ ಬಟ್ಟೆ ಹಾಗೂ ಉಡುಗೊರೆ ಕೊಡಿಸಲು ಬಂದಿದ್ದ ದೇವೇಂದ್ರಗೌಡನಿಗೆ ನಗರದ ಹೊರವಲಯದಲ್ಲಿರುವ ಸ್ವರ್ಣ ಪಾರ್ಕ್ಗೆ ಕರೆಸಿಕೊಂಡು, ರೀಲ್ಸ್ ಮಾಡುವುದಾಗಿ ಹೇಳಿ ಯುವಕನ ಕಣ್ಣಿಗೆ ಬಟ್ಟೆ ಕಟ್ಟಿ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪಾರ್ಕಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕಂಡ ದಾರಿಹೋಕರು ತಕ್ಷಣವೇ ಪೊಲೀಸರಿಗೆ ಮತ್ತು ಆಂಬ್ಯುಲೆನ್ಸ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದಾವಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಯುವಕನನ್ನು ದಾವಣಗೆರೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಬಾಲಕಿ ವಿರುದ್ಧ ಯುವಕನ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಯುವಕನ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ್ದ ಹದಿನೇಳು ವರ್ಷದ ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕನನ್ನು ಕತ್ತು ಕೊಯ್ದು ಹತ್ಯೆ ಮಾಡಲು ಕಾರಣವೇನು.? ಎಂಬುದಕ್ಕೆ ಪೊಲೀಸರ ತನಿಖೆಯ ನಂತರವಷ್ಟೇ ತಿಳಿಯಲಿದೆ.
ಇದನ್ನೂ ಓದಿ: ಬಿಹಾರ ಸಚಿವ ತೇಜ್ ಪ್ರತಾಪ್ ಆಪ್ತರ ಬ್ಯಾಗ್ಗಳ ಹೊರ ಹಾಕಿದ ಹೋಟೆಲ್ ಸಿಬ್ಬಂದಿ: ಆರೋಪ