ಹಾನಗಲ್: ಎಟಿಎಂ ಕಾರ್ಡ್ ಬದಲಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಮಹಿಳೆಯನ್ನು ಹಾನಗಲ್ ಪೊಲೀಸರು ಕಾರ್ಯಾಚಣೆ ನಡೆಸಿ ಬಂಧಿಸಿದ್ದಾರೆ.
ತಾಲೂಕಿನ ಬಾಳೂರ ಗ್ರಾಮದ ಶಿರಾಳಕೊಪ್ಪ ನಿವಾಸಿ ಕೌಸರ ಬಾನು ಇಸ್ರಾರಹ್ಮದ ಬಂಕಾಪೂರ (35) ಬಂಧಿತ ಆರೋಪಿ. ಈಕೆ ವಿವಿಧ ಬ್ಯಾಂಕ್ಗಳ ನಕಲಿ ಎಟಿಎಂ ಕಾರ್ಡ್ಗಳನ್ನು ಬಳಸಿ, ಹಣ ತೆಗೆದುಕೊಡುವ ನೆಪದಲ್ಲಿ ಹಣ ಡ್ರಾ ಮಾಡಿಕೊಂಡು ನಂತರ ಅವರಿಗೆ ನಕಲಿ ಕಾರ್ಡ್ ನೀಡಿ ವಂಚಿಸುತಿದ್ದಳು ಎಂದು ತಿಳಿದು ಬಂದಿದೆ.
ಹಾನಗಲ್ ಪಟ್ಟಣದ ಎಟಿಎಂ ಬಳಿ ನಿಲ್ಲುತಿದ್ದ ಇವಳು ಅನಕ್ಷರಸ್ಥರನ್ನು ಟಾರ್ಗೆಟ್ ಮಾಡಿಕೊಂಡಿದ್ದಳು. ಸೆ. 11ರಂದು ಆ್ಯಕ್ಸಿಸ್ ಬ್ಯಾಂಕ್ ಬಳಿ ಕಲಗುದರಿ ಗ್ರಾಮದ ಮೈಲಾರಪ್ಪ ಎಂಬುವರಿಗೆ ಹಣ ಚೆಕ್ ಮಾಡಿಕೊಡುವ ನಾಟಕವಾಡಿ ನಕಲಿ ಎಟಿಎಂ ಕಾರ್ಡ್ ನೀಡಿದ್ದಳು. ನಂತರ ಸ್ಥಳೀಯ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ 25,000 ರೂ. ಡ್ರಾ ಮಾಡಿದ್ದಳು. ಜೊತೆಗೆ ಮಹಾರಾಜ ಪೇಟೆಯ ಪುಷ್ಪಾ ಎಂಬುವರಿಗೆ 5000 ರೂ. ಡ್ರಾ ಮಾಡಿಕೊಟ್ಟು ಕಾರ್ಡ್ ಬದಲಿಸಿದ್ದಳು.
ಈ ಕುರಿತು ಪ್ರಕರಣ ದಾಖಲಾದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು, ಚಾಲಕಿ ಕಳ್ಳಿಯನ್ನು ಬಂಧಿಸಿದ್ದಾರೆ.