ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇದೀಗ ಅಕ್ರಮ ಕಲ್ಲು ಗಣಿಗಾರಿಕೆ ನಡೆದಿರುವ ಆರೋಪ ಕೇಳಿ ಬಂದಿದೆ.
ಕಜ್ಜರಿ, ದೇವರಗುಡ್ಡ ಮತ್ತು ಬುಡಪನಹಳ್ಳಿ ಗ್ರಾಮಗಳ ಸುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸುಮಾರು 360 ಎಕರೆ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದರಿಂದಾಗಿ ಈ ಗ್ರಾಮಗಳಿಗೆ ಸೇರಿದ ಹುಲ್ಲುಗಾವಲು ಹಾಳಾಗುತ್ತಿದೆ. ಸರ್ಕಾರದ ನಿಯಮಗಳನ್ನ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುವುದರಿಂದ ಗ್ರಾಮಗಳಲ್ಲಿ ಮನೆಗಳು ನಡುಗಿದಂತಾಗುತ್ತದೆ. ಶಬ್ದದಿಂದ ಜನ ಜಾನುವಾರುಗಳು ಭಯಭೀತರಾಗಿದ್ದಾರೆ ಎನ್ನಲಾಗಿದೆ.
![villages in Ranebennur taluk illegal stone mining news](https://etvbharatimages.akamaized.net/etvbharat/prod-images/kn-hvr-01-illegal-crusher-7202143_20112020202149_2011f_1605883909_156.png)
ಈ ಕುರಿತಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ನಿಯಮಗಳಂತೆ ಕಲ್ಲು ಗಣಿಗಾರಿಕೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
![villages in Ranebennur taluk illegal stone mining news](https://etvbharatimages.akamaized.net/etvbharat/prod-images/kn-hvr-01-illegal-crusher-7202143_20112020202149_2011f_1605883909_657.png)