ಹಾವೇರಿ : ಉತ್ತರಕರ್ನಾಟಕದಲ್ಲಿ ವಿವಿಧ ಸಂಪ್ರದಾಯಗಳು ಆಚರಣೆಯಲ್ಲಿವೆ. ಇಂತಹ ಆಚರಣೆಗಳಲ್ಲಿ ಗಣೇಶ ಚತುರ್ಥಿಯಂದು ಕಾಣಿಸಿಕೊಳ್ಳುವ ಜೋಕುಮಾರಸ್ವಾಮಿ ಆಚರಣೆಯೂ ಒಂದು.
ಗಣೇಶ ಚತುರ್ಥಿಯ ಐದನೇ ದಿನ, ಅಂದರೆ ಅಷ್ಟಮಿಯ ದಿನ ಮೂಲಾನಕ್ಷತ್ರದಲ್ಲಿ ಜೋಕುಮಾರನ ಜನನವಾಗುತ್ತದೆ. ಅಣಜಿಗರ ಮನೆಯಿಂದ ಮಣ್ಣು ತಂದು ಕುಂಬಾರರ ಮನೆಯಲ್ಲಿ ಜೋಕುಮಾರನ ಮೂರ್ತಿ ಸಿದ್ಧಪಡಿಸಲಾಗುತ್ತದೆ. ಬಾರ್ಕೇರ ಮನೆತನದವರು ಈ ಮೂರ್ತಿಯನ್ನು ಏಳು ಊರುಗಳ ಸಂಚಾರ ಮಾಡುತ್ತಾರೆ. ಪ್ರಮುಖವಾಗಿ ಈ ಜೋಕುಮಾರ ಸ್ವಾಮಿ ರೈತರ ಮನೆಗೆ ಭೇಟಿ ನೀಡುತ್ತಾನೆ. ಜೋಕುಮಾರ ಸ್ವಾಮಿಯನ್ನು ಹೊತ್ತ ಮಹಿಳೆಯರು ಇಲ್ಲಿನ ಮನೆಗಳಿಗೆ ಭೇಟಿ ನೀಡುತ್ತಾರೆ. ಮನೆಯ ಮುಂದೆ ಬಾಗಿಲಲ್ಲಿ ಜೋಕುಮಾರಸ್ವಾಮಿ ಮೂರ್ತಿ ಇಟ್ಟು, ಸ್ವಾಮಿಯ ಹಾಡು ಹಾಡುತ್ತಾರೆ.
ಹೀಗೆ ಮನೆಗೆ ಬಂದ ಜೋಕುಮಾರಸ್ವಾಮಿಗೆ ಮನೆಯವರು ಜೋಳ, ಅಕ್ಕಿ, ರೊಟ್ಟಿ, ಮೆಣಸಿನಕಾಯಿ ತರಕಾರಿ ಸೇರಿದಂತೆ ವಿವಿಧ ಧಾನ್ಯಗಳನ್ನು ನೀಡುತ್ತಾರೆ. ಈ ರೀತಿ ಧಾನ್ಯ ನೀಡಿದ ಮಹಿಳೆಯರಿಗೆ ಜೋಕುಮಾರಸ್ವಾಮಿ ಹೊತ್ತ ಮಹಿಳೆಯರು ಕಾಡಿಗೆ ಮತ್ತು ಅಂಬಲಿ ನೀಡುತ್ತಾರೆ. ಈ ಕಾಡಿಗೆಯನ್ನು ಮನೆಯ ಬಾಗಿಲಿಗೆ ಹಚ್ಚಿ, ಅಂಬಲಿಯನ್ನು ಜಮೀನುಗಳಿಗೆ ಚರಗ ಚೆಲ್ಲುತ್ತಾರೆ. ಈ ರೀತಿ ಚರಗ ಚೆಲ್ಲುವುದರಿಂದ ಉತ್ತಮ ಫಸಲು ಬರುತ್ತದೆ ಎಂಬ ನಂಬಿಕೆ ಈ ಭಾಗದಲ್ಲಿದೆ.
ಜನರ ಇಷ್ಟಾರ್ಥವನ್ನು ಕರುಣಿಸುವ ಜೋಕುಮಾರ : ಜೋಕುಮಾರಸ್ವಾಮಿಗೆ ಕಾಲುಗಳಿಲ್ಲದ ಕಾರಣ ಮಹಿಳೆಯರು ಬುಟ್ಟಿಯಲ್ಲಿ ಹೊತ್ತುಕೊಂಡು ತಿರುಗುತ್ತಾರೆ. ಮದುವೆಯಾಗದವರಿಗೆ ಮದುವೆ, ಮಕ್ಕಳಾಗದವರಿಗೆ ಸಂತಾನ ಭಾಗ್ಯವನ್ನು ಜೋಕುಮಾರಸ್ವಾಮಿ ಕರುಣಿಸುತ್ತಾನೆ ಎಂಬ ನಂಬಿಕೆ ಇದೆ. ಈ ರೀತಿ ಬೇಡಿಕೊಂಡವರು ಜೋಕುಮಾರಸ್ವಾಮಿಗೆ ಬೆಳ್ಳಿಯ ತೊಟ್ಟಿಲು, ಲಿಂಗದಕಾಯಿ ಮತ್ತು ಉಡುದಾರ ನೀಡುತ್ತಾರೆ. ಜೊತೆಗೆ ಜೋಕುಮಾರಸ್ವಾಮಿ ಬಾಯಿಗೆ ಬೆಣ್ಣೆಯನ್ನು ಹಚ್ಚಲಾಗುತ್ತದೆ. ಈ ರೀತಿ ಬೆಣ್ಣೆ ಸವರಿದರೆ ಮನೆಯಲ್ಲಿ ಆಕಳುಗಳು ಸಮೃದ್ಧವಾಗಿ ಹಾಲು ನೀಡುತ್ತವೆಯಂತೆ.
ಏನಿದು ಐತಿಹ್ಯ.. ಅನಂತಚತುರ್ದಶಿ ದಿನ ಜೋಕುಮಾರ ಸ್ವಾಮಿಯ ಅಂತ್ಯವಾಗುತ್ತದೆ. ಅಗಸರು ಜೋಕುಮಾರನ ತಲೆ ಒಡೆದು ಹೊಲಿ ತೆಗೆಯುತ್ತಾರೆ. ಇನ್ನು, ಜೋಕುಮಾರಸ್ವಾಮಿಯನ್ನು ಗಣೇಶ ಸಹೋದರ ಎನ್ನಲಾಗುತ್ತದೆ. ಗಣೇಶನನ್ನು ಭೂಲೋಕದಲ್ಲಿ ಭಕ್ತರು ಸಮೃದ್ಧಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಜೋಕುಮಾರನಿಗೆ ನೈಜತೆಯಿಂದ ನಡೆದುಕೊಳ್ಳುತ್ತಾರೆ.
ಗಣೇಶನು ಪಾರ್ವತಿ ಪರಮೇಶ್ವರನ ಬಳಿ ತೆರಳಿ ಭೂಲೋಕದಲ್ಲಿ ಎಲ್ಲ ಸಮೃದ್ದಿಯಾಗಿದೆ ಎಂದು ತಿಳಿಸುತ್ತಾನೆ. ಆದರೆ ಜೋಕುಮಾರ ಭೂಲೋಕದ ನೈಜತೆಯನ್ನು ಪಾರ್ವತಿ ಪರಮೇಶ್ವರನಿಗೆ ತಿಳಿಸುತ್ತಾನೆ ಎಂಬುದು ಐತಿಹ್ಯ. ಇಲ್ಲಿ ಅಣಜಿಗರು, ಕುಂಬಾರರು, ಬಾರ್ಕೇರರು, ಬ್ರಾಹ್ಮಣರು ಮತ್ತು ಅಗಸರು ಹೀಗೆ ವಿವಿಧ ಸಮುದಾಯಗಳ ಮನೆಗಳಿಗೆ ಸಂಚರಿಸುವ ಜೋಕುಮಾರಸ್ವಾಮಿ ಎಲ್ಲರ ಮನೆಗೆ ಸಂಚರಿಸುತ್ತಾನೆ. ಅಷ್ಟಮಿಯ ನಂತರದ ದಿನಗಳಲ್ಲಿ ಉತ್ತರಕರ್ನಾಟಕದಲ್ಲಿ ಜೋಕುಮಾರ ಸ್ವಾಮಿಯನ್ನು ಹೊತ್ತ ಮಹಿಳೆಯರು ಕಾಣಸಿಗುತ್ತಾರೆ.
ಇದನ್ನೂ ಓದಿ : ಹಾವೇರಿ: ಧಾರಾಕಾರ ಮಳೆಗೆ ಗೋಡೆ ಕುಸಿದು ಓರ್ವ ಸಾವು