ಹಾವೇರಿ: ರಾಜ್ಯದ ಒಂದೊಂದು ನಗರ ಒಂದೊಂದು ತಿನಿಸಿನಿಂದ ಹೆಸರು ಪಡೆದಿದೆ. ಹಾಗೆಯೇ ಹಾವೇರಿ ಜಿಲ್ಲೆಯ ಸವಣೂರು 'ಖಾರ'ಕ್ಕೆ ಫೇಮಸ್. ಹೌದು ಇಲ್ಲಿನ ಶಿವಲಾಲ ಖಾರಾ ಸವಣೂರು ಖಾರ ಅಂತಲೇ ಪ್ರಸಿದ್ಧಿ ಪಡೆದಿದೆ. ಸವಣೂರು ಖಾರ ತನ್ನ ರುಚಿಯಿಂದ ದೇಶ ವಿದೇಶಗಳಲ್ಲಿ ಉತ್ತಮ ವಹಿವಾಟು ನಡೆಸುತ್ತಿದೆ.
ಈ ಖಾರದ ಮೂಲ ಹುಡುಕುತ್ತಾ ಹೋದರೆ ಇದಕ್ಕೆ ಕರಾಚಿಯ ನಂಟು ಸಿಗುತ್ತದೆ. ಕರಾಚಿಯಿಂದ ಗುಜರಾತ್‌ಗೆ ಆಗಮಿಸಿದ್ದ ಕೊಟಕ್ ಕುಟುಂಬವೊಂದು ಶಿವಲಾಲ್‌ನಲ್ಲಿ ಈ ವಿಶಿಷ್ಟ ರೀತಿಯ ಖಾರ ತಯಾರಿಸುತ್ತಿದ್ದರಂತೆ. ಆಗ ಅಲ್ಲಿಗೆ ಹೋಗಿದ್ದ ಸವಣೂರು ನವಾಬರು, ಖಾರದ ಸವಿ ಕಂಡು ಕೊಟಕ್ ಕುಟುಂಬವನ್ನು ಸವಣೂರಿಗೆ ಕರೆತಂದಿದ್ದರಂತೆ. ಸವಣೂರಿನಲ್ಲಿ ನೆಲೆನಿಂತ ಕೊಟಕ್ ಕುಟುಂಬ ಈ ರುಚಿಕರ ಖಾರ ತಯಾರಿಸುತ್ತಿದೆ.
ಇನ್ನು ರಾಜ್ಯದಲ್ಲಿ ಸಿಗುವ ಉಳಿದ ಖಾರದಂತೆ ಸವಣೂರು ಖಾರ ಇಲ್ಲ. ಇದು ದಾಣಿ, ಸೇವು, ಗಾಟೆ ಮತ್ತು ಚೂಡಾದಿಂದ ವಿಶಿಷ್ಟ ರುಚಿ ನೀಡುತ್ತದೆ. ಉಳಿದ ಖಾರಗಳು ಖಾರದ ರುಚಿ ನೀಡಿದರೆ ಇದರಲ್ಲಿ ಖಾರ ಮಿಶ್ರಿತ ಸಿಹಿ ಇರುತ್ತದೆ. ಇದರ ಎಲ್ಲಾ ಮೂಲವಸ್ತುಗಳು ಈಗಲೂ ಗುಜರಾತ್ನಿಂದಲೇ ಬರುತ್ತವೆ . ಕೊಟಕ್ ಕುಟುಂಬ ಅಲ್ಲಿಂದಲೇ ಕಚ್ಚಾ ವಸ್ತುಗಳನ್ನು ತರಿಸಿ ರುಚಿಕರವಾದ ಖಾರ ತಯಾರಿಸುತ್ತಿದೆ. ಉಳಿದ ಖಾರ ತಿನ್ನುವುದಕ್ಕೂ ಸವಣೂರು ಖಾರಾ ತಿನ್ನುವುದಕ್ಕೂ ಬಹಳ ವ್ಯತ್ಯಾಸವಿದೆ ಎನ್ನುತ್ತಾರೆ ಗ್ರಾಹಕರು.
ಇದನ್ನೂ ಓದಿ: ಪುಟ್ಟ ಗುಡಿಸಲಿಂದ ವಿದೇಶ ತಲುಪಿದ ಗೋಕಾಕ್ ಕರದಂಟು ಸ್ವಾದ..!
ಸವಣೂರಿನ ಖಾರ ಅಮೆರಿಕ ಸೇರಿದಂತೆ ವಿದೇಶಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಇಲ್ಲಿಂದ ಬೇರೆ ಬೇರೆ ದೇಶಗಳಿಗೆ ಹೋಗಿರುವ ಭಾರತೀಯರು ಸವಣೂರು ಖಾರ ತರಿಸಿಕೊಂಡು ವಿದೇಶದಲ್ಲಿಯೂ ಸವಣೂರು ಖಾರವನ್ನು ಸವಿಯುತ್ತಿದ್ದಾರೆ. ಹಾವೇರಿ, ಸವಣೂರು, ಶಿಗ್ಗಾವಿ, ರಾಣೆಬೆನ್ನೂರು ಸೇರಿದಂತೆ ವಿವಿಧೆಡೆ ಈ ಖಾರದ ಅಂಗಡಿಗಳಿಗೆ ಜನ ಮುಗಿಬಿದ್ದು ಖರೀದಿಸುತ್ತಾರೆ.