ಹಾವೇರಿ: ಕಾಂಗ್ರೆಸ್ ಪಕ್ಷದ ಭೋಜನಕೂಟದಲ್ಲಿ ಭಾಗವಹಿಸಿದ್ದ ಬಿಜೆಪಿಯ ಮೂವರು ಶಾಸಕರಿಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟಾಂಗ್ ಕೊಟ್ಟರು. ವೀರ್ ಸಾವರ್ಕರ್ ಸಂಸ್ಮರಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಾವೇರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ತಾಳಿ ಯಾರ ಜೊತೆ ಕಟ್ಟಿಸಿಕೊಂಡಿರ್ತಾರೋ ಅವರ ಜೊತೆ ಸಂಸಾರ ಮಾಡಬೇಕು. ಅದನ್ನು ಬಿಟ್ಟು ಅವರ ಜೊತೆ ಸಂಸಾರ ಮಾಡ್ತೀನಿ, ಇವರ ಜೊತೆ ಸಂಸಾರ ಮಾಡ್ತೀನಿ ಎಂದರೆ ರಾಜಕೀಯ ಪಕ್ಷದಲ್ಲಿ ಇದು ಒಳ್ಳೆಯ ವ್ಯವಸ್ಥೆ ಅಲ್ಲ. ಮೂವರು ಶಾಸಕರಿಗೆ ನೇರವಾಗಿ ಹೇಳುತ್ತಿದ್ದೇನೆ. ಇರ್ತೀರಾ ನೇರವಾಗಿ ಬಿಜೆಪಿಯಲ್ಲೇ ಇರಿ, ಇಲ್ವಾ ಹೋಗ್ತೀರಾ ಹೋಗಿ, ನಮ್ಮದೇನೂ ಅಭ್ಯಂತರ ಇಲ್ಲ. ಬಿಜೆಪಿಯಲ್ಲಿ ಲಕ್ಷ ಲಕ್ಷ ಕಾರ್ಯಕರ್ತರಿದ್ದಾರೆ. ನಮಗೆ ದೇಶ ಹಾಗೂ ಧರ್ಮ ಉಳಿಯಬೇಕು. ಅಧಿಕಾರಕ್ಕೋಸ್ಕರ ಬಂದು ಅಧಿಕಾರಕ್ಕಾಗಿ ಹೋಗ್ತೀರಾ ಅಂದರೆ ಹೋಗಿ ಎಂದು ಹೇಳಿದರು.
ಲೋಕಸಭೆ ಎಲೆಕ್ಷನ್-'ಬಿಜೆಪಿಗೆ ಬಹುಮತ': ಕರ್ನಾಟಕದ ಜನರು ಅವರು ನೀಡಿದ ಗ್ಯಾರಂಟಿಗಳ ಭರವಸೆ ಮೇಲೆ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿದರು. ಈ ರೀತಿ ಭರವಸೆಗಳ ಗ್ಯಾರಂಟಿ ಕೊಟ್ಟು ಕರ್ನಾಟಕದ ಜನರಿಗೆ ಕಾಂಗ್ರೆಸ್ ಮೋಸ ಮಾಡಿತೆಂದು ತೀರ್ಮಾನವಾಗಿ ಮತದಾರರು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ನಿರೀಕ್ಷೆ ಮೀರಿ ಬಿಜೆಪಿ ಗೆಲ್ಲಿಸಿದ್ದಾರೆ.
ಚುನಾವಣೆಯ ದೃಷ್ಟಿಯಿಂದ ಭರವಸೆ ನೀಡಿದ್ದೆವು ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸುಳ್ಳು ಭರವಸೆಯ ಎಫೆಕ್ಟ್ ಬರುವ ಲೋಕಸಭೆ ಚುನಾವಣೆ ಮೇಲೂ ಆಗುತ್ತದೆ. ಬಿಜೆಪಿಗೆ ಬಹುಮತ ಬರುತ್ತದೆ, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಲಿದ್ದಾರೆ ಎಂದು ತಿಳಿಸಿದರು.
ಅಪ್ಪಟ ದೇಶಪ್ರೇಮಿ ವೀರ್ ಸಾವರ್ಕರ್: ಅಪ್ಪಟ ದೇಶಪ್ರೇಮಿ ವೀರ್ ಸಾವರ್ಕರ್ ಬಗ್ಗೆ ಹಾಡು ಬರೆದಿದ್ದಾರೆ. ಈ ಹಾಡನ್ನು ಒಂದು ಸಾವಿರ ಮಹಿಳೆಯರು ಹೇಳ್ತಾರೆ. ನಾನು ಈ ಸಂಸ್ಮರಣಾ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹಾಗೂ ಅನೇಕ ಮುಖಂಡರು ಬಂದಿದ್ದಾರೆ. ಸಂಸ್ಮರಣಾ ಕಾರ್ಯಕ್ರಮಕ್ಕೆ ತಾಲೂಕಿನಿಂದ ಅಪಾರ ಕಾರ್ಯಕರ್ತ ಆಗಮಿಸಿದ್ದಾರೆ ಎಂದರು.
ಇದನ್ನೂಓದಿ: ನಾನು ಸಿಎಲ್‌ಪಿ ಸಭೆಗೆ ಹೋಗಿಲ್ಲ, ನಾನು ಡಿಸಿಎಂ ಕರೆದ ಭೋಜನಕೂಟಕ್ಕೆ ಹೋಗಿದ್ದೆ: ಎಸ್ ಟಿ ಸೋಮಶೇಖರ್