ಹಾವೇರಿ : ರಾಜ್ಯಾದ್ಯಂತ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಉತ್ತರ ಕರ್ನಾಟಕದಲ್ಲೂ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಇಲ್ಲಿ ಗಣೇಶ ಚತುರ್ಥಿಯ ನಂತರ ಕಾಣಿಸಿಕೊಳ್ಳುವ ಪ್ರಮುಖ ಆಚರಣೆಗಳಲ್ಲಿ ಜೋಕುಮಾರಸ್ವಾಮಿಯೂ ಒಂದು.
ಗಣೇಶ ಚತುರ್ಥಿಯ ಐದನೇ ದಿನ ಅಂದರೆ, ಅಷ್ಟಮಿಯ ದಿನ ಮೂಲಾನಕ್ಷತ್ರದಲ್ಲಿ ಜೋಕುಮಾರಸ್ವಾಮಿಯ ಜನನವಾಗುತ್ತದೆ. ಬಾರ್ಕೇರ ಮನೆತನದವರು ಹೊಲದಿಂದ ಮಣ್ಣು ತಂದು ಬಡಿಗೇರ ಮನೆಯಲ್ಲಿ ಜೋಕುಮಾರಸ್ವಾಮಿಯ ಮೂರ್ತಿಯನ್ನು ಮಾಡಿಸುತ್ತಾರೆ. ನಂತರ ಏಳು ದಿನಗಳ ಕಾಲ ಆ ಮೂರ್ತಿಯನ್ನು ಬಾರ್ಕೇರ ಮನೆತನದವರು ಏಳು ಊರುಗಳಿಗೆ ತಗೆದುಕೊಂಡು ಹೋಗುತ್ತಾರೆ. ಅದರಲ್ಲೂ ಪ್ರಮುಖವಾಗಿ ರೈತರ ಮನೆಗೆ ಜೋಕುಮಾರಸ್ವಾಮಿಯನ್ನು ಹೊತ್ತುಕೊಂಡು ಹೋಗಲಾಗುತ್ತದೆ.
ಜೋಕುಮಾರನನ್ನು ಹೊತ್ತು ಬರುವ ಮಹಿಳೆಯರು : ಜೋಕುಮಾರಸ್ವಾಮಿಗೆ ಕಾಲುಗಳಿಲ್ಲದ ಕಾರಣ ಮಹಿಳೆಯರು ಬುಟ್ಟಿಯಲ್ಲಿ ಹೊತ್ತು ತಿರುಗುತ್ತಾರೆ. ಜೋಕುಮಾರ ಸ್ವಾಮಿಯನ್ನು ಹೊತ್ತು ತಂದ ಮಹಿಳೆಯರು ಮನೆ ಮನೆಗೆ ಭೇಟಿ ನೀಡುತ್ತಾರೆ. ಮನೆಯ ಮುಂದೆ ಬಾಗಿಲಲ್ಲಿ ಜೋಕುಮಾರಸ್ವಾಮಿ ಮೂರ್ತಿ ಇಟ್ಟು ಅವನ ಕುರಿತು ಜಾನಪದ ಹಾಡು ಹೇಳುತ್ತಾರೆ. ಈ ವೇಳೆ ಮನೆಯವರು ಜೋಕುಮಾರಸ್ವಾಮಿಗೆ ಜೋಳ, ಅಕ್ಕಿ, ರೊಟ್ಟಿ, ಮೆಣಸಿನಕಾಯಿ, ಹುಣಸಿಹಣ್ಣು, ತರಕಾರಿ ಸೇರಿದಂತೆ ವಿವಿಧ ಧಾನ್ಯಗಳನ್ನು ನೀಡುತ್ತಾರೆ. ಈ ರೀತಿ ಧಾನ್ಯ ನೀಡಿದ ಮಹಿಳೆಯರಿಗೆ ಜೋಕುಮಾರಸ್ವಾಮಿ ಹೊತ್ತ ಮಹಿಳೆಯರು ಕಾಡಿಗೆ ಮತ್ತು ಅಂಬಲಿಯನ್ನು ನೀಡುತ್ತಾರೆ. ಈ ಕಾಡಿಗೆಯನ್ನು ಮನೆಯ ಬಾಗಿಲಿಗೆ ಹಚ್ಚುವುದು ಸಂಪ್ರದಾಯ. ಅಂಬಲಿಯನ್ನು ರೈತರು ಜಮೀನುಗಳಿಗೆ ಚರಗ ಚೆಲ್ಲುತ್ತಾರೆ. ಅಂಬಲಿಯನ್ನು ಜಮೀನಿಗೆ ಚರಗ ಚೆಲ್ಲುವುದರಿಂದ ಉತ್ತಮ ಬೆಳೆ ಬರುತ್ತದೆ ಎಂಬುದು ಜನರ ನಂಬಿಕೆ.
ಸಮೃದ್ಧಿಯನ್ನು ಹೊತ್ತು ತರುವ ಜೋಕುಮಾರಸ್ವಾಮಿ : ಪ್ರಸ್ತುತ ಮಳೆಯಿಲ್ಲದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಜೋಕುಮಾರ ಸ್ವಾಮಿಯನ್ನು ಹೊತ್ತ ಮಹಿಳೆಯರ ತಲೆಗೆ ಗ್ರಾಮಸ್ಥರು ನೀರು ಹಾಕುತ್ತಾರೆ. ಈ ರೀತಿ ಮಾಡಿದರೆ ಜೋಕುಮಾರಸ್ವಾಮಿ ಕೈಲಾಸಕ್ಕೆ ಹೋಗಿ ಮಳೆಯಿಲ್ಲದ ರೈತರ ಸಂಕಷ್ಟವನ್ನು ಪಾರ್ವತಿ ಪರಮೇಶ್ವರನಿಗೆ ತಿಳಿಸುತ್ತಾನೆ. ಬಳಿಕ ಭೂಲೋಕದಲ್ಲಿ ಮಳೆ ಬೆಳೆ ಉಂಟಾಗುತ್ತದೆ ಎಂಬುದು ನಂಬಿಕೆ. ಜೊತೆಗೆ ಮದುವೆಯಾಗದವರಿಗೆ ಮದುವೆ, ಮಕ್ಕಳಾಗದವರಿಗೆ ಸಂತಾನಭಾಗ್ಯವನ್ನು ಜೋಕುಮಾರಸ್ವಾಮಿ ಕಲ್ಪಿಸುತ್ತಾನೆ. ಈ ರೀತಿ ಬೇಡಿಕೊಂಡವರು ಜೋಕುಮಾರ ಸ್ವಾಮಿಗೆ ತೊಟ್ಟಿಲು, ಲಿಂಗದಕಾಯಿ ಮತ್ತು ಉಡುದಾರ ನೀಡುತ್ತಾರೆ. ಅಲ್ಲದೆ ಜೋಕುಮಾರಸ್ವಾಮಿ ಬಾಯಿಗೆ ಬೆಣ್ಣೆ ಸವರಲಾಗುತ್ತದೆ. ಈ ರೀತಿ ಬೆಣ್ಣೆ ಸವರಿದರೆ ಮನೆಯಲ್ಲಿ ಹಸುಗಳು ಹಾಲು ಹೆಚ್ಚು ನೀಡುತ್ತವೆ ಎಂಬುದು ಜನರ ನಂಬಿಕೆಯಾಗಿದೆ.
ಎಲ್ಲರ ಮನೆಗೆ ಭೇಟಿ ನೀಡುವ ಸ್ವಾಮಿ : ಉತ್ತರ ಕರ್ನಾಟಕದಲ್ಲಿ ಜೋಕುಮಾರನನ್ನು ರಸಿಕ ಎನ್ನಲಾಗುತ್ತದೆ. ಮಹಿಳೆಯರನ್ನು ಕಾಡಿಸುವ ಪುರುಷರಿಗೆ ಜೋಕುಮಾರ ಎಂದು ಮೂದಲಿಸಲಾಗುತ್ತದೆ. ಅನಂತ ಚತುರ್ದಶಿ ದಿನ ಜೋಕುಮಾರ ಸಾವನ್ನಪ್ಪುತ್ತಾನೆ. ಅಗಸರು ಜೋಕುಮಾರನ ತಲೆಒಡೆದು ಹೊಲಿ ತೆಗೆಯುತ್ತಾರೆ. ಇನ್ನು ಜೋಕುಮಾರಸ್ವಾಮಿ ಗಣೇಶ ಸಹೋದರ. ಗಣೇಶನನ್ನು ಭೂಲೋಕದಲ್ಲಿ ಭಕ್ತರು ಸಮೃದ್ಧಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಜೋಕುಮಾರನಿಗೆ ನೈಜತೆಯಿಂದ ನಡೆದುಕೊಳ್ಳುತ್ತಾರೆ. ಗಣೇಶನು ಪಾರ್ವತಿ ಪರಮೇಶ್ವರರ ಬಳಿ ತೆರಳಿ ಭೂಲೋಕದಲ್ಲಿ ಎಲ್ಲ ಸಮೃದ್ಧಿಯಾಗಿದೆ ಎಂದು ತಿಳಿಸುತ್ತಾನೆ. ಆದರೆ ಜೋಕುಮಾರ ಭೂಲೋಕದ ನೈಜತೆಯನ್ನು ಪಾರ್ವತಿ ಪರಮೇಶ್ವರನಿಗೆ ಹೇಳುತ್ತಾನೆ. ಅಣಜಿಗರು, ಕುಂಬಾರರು, ಬಾರ್ಕೇರರು, ಬ್ರಾಹ್ಮಣರು ಮತ್ತು ಅಗಸರು ಹೀಗೆ ವಿವಿಧ ಜಾತಿಗಳ ಮನೆಗಳಿಗೆ ಜೋಕುಮಾರಸ್ವಾಮಿ ಭೇಟಿ ನೀಡಿ ಹರಸುತ್ತಾರೆ. ಅಷ್ಟಮಿಯ ನಂತರದ ದಿನಗಳಲ್ಲಿ ಉತ್ತರಕರ್ನಾಟಕದಲ್ಲಿ ಜೋಕುಮಾರಸ್ವಾಮಿ ಹೊತ್ತ ಮಹಿಳೆಯರು ಕಾಣುತ್ತಾರೆ.
ಇದನ್ನೂ ಓದಿ : ಉತ್ತರ ಕರ್ನಾಟಕದಲ್ಲಿ ಜೋಕುಮಾರ ಸ್ವಾಮಿ ಆಚರಣೆ ವಿಶೇಷ ಮತ್ತು ಹಿನ್ನೆಲೆ ಏನು?