ಹಾವೇರಿ: ಕಾಂಗ್ರೆಸ್‌ನವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮೀಸಲಾತಿ ವಾಪಸ್ ನೀಡುತ್ತೇವೆ ಎನ್ನುತ್ತಿದ್ದಾರೆ. ಅವರು ಯಾರ ಮೀಸಲಾತಿ ತೆಗೆದು ಮುಸ್ಲಿಮರಿಗೆ ಮೀಸಲಾತಿ ನೀಡುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪರ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದ್ದಾರೆ. ಆದರೆ ಬೊಮ್ಮಾಯಿ ಸರ್ಕಾರ ಅವರಿಗಿದ್ದ ಮೀಸಲಾತಿಯನ್ನ ತೆಗೆದು ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ನೀಡಿದೆ. ಈಗ ಕಾಂಗ್ರೆಸ್ನ ಡಿಕೆ ಶಿವಕುಮಾರ್ ಅವರು ತಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮತ್ತೆ ಮೀಸಲಾತಿ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲಾ ಅದು ಬೇರೆ ಪ್ರಶ್ನೆ ಎಂದು ಅಮಿತ್ ಶಾ ವ್ಯಂಗ್ಯವಾಡಿದರು.
2024ರಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನೀವು ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಮತ್ತು ಸಂಸದ ಶಿವಕುಮಾರ್ ಉದಾಸಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಸಮಾವೇಶಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಸಂಸದ ಶಿವಕುಮಾರ್ ಉದಾಸಿ ಹಾಗೂ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಮೇಲೆ ತೋರಿಸಿದ ಪ್ರೀತಿಗೆ ಅಮಿತ್ ಶಾ ಅವರು ಎರಡು ಕೈಗಳಿಂದ ನಮಸ್ಕರಿಸುವುದಾಗಿ ತಿಳಿಸಿದರು.
ಮೂರು ಬಾರಿ ಕೈಕೊಟ್ಟ ಮೈಕ್: ರಾಣೆಬೆನ್ನೂರಿನಲ್ಲಿ ಅಮಿತ್ ಶಾ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುಪವಾಗ ಮೂರು ಬಾರಿ ಮೈಕ್ ಕೈ ಕೊಟ್ಟ ಪ್ರಸಂಗ ಸಹ ನಡೆಯಿತು. ಇದರಿಂದ ಕೋಪಗೊಂಡ ಅವರು ಮೈಕ್ ಅನ್ನು ಎಸೆದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ