ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದ ಬಹುತೇಕ ಏರಿಯಾಗಳಲ್ಲಿ ಯುಜಿಡಿ ತುಂಬಿದ ಕಾರಣ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಕಾಸ ನಗರ, ಚೌಡೇಶ್ವರಿ ನಗರ, ವಾಗೀಶ್ ನಗರದಲ್ಲಿ ಯುಜಿಡಿ ಬ್ಲಾಕ್ ಆಗಿದೆ. ಇದರಿಂದ ಶೌಚಾಲಯದ ಕಲ್ಮಶ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಾಹನ ಸವಾರರು, ಸಾರ್ವಜನಿಕರು ರಸ್ತೆಯ ಮೇಲೆ ತೆರಳುವಾಗ ಯುಜಿಡಿ ವಾಸನೆ ತಾಳಲಾರದೆ ಮೂಗು ಮುಚ್ಚಿಕೊಂಡು ಹೋಗುವ ಸನ್ನಿವೇಶ ಎದುರಾಗಿದೆ.
ಯುಜಿಡಿ ನೀರು ರಸ್ತೆ ಮೇಲೆ ಹರಿಯುವುದರಿಂದ ರಸ್ತೆಯ ಡಾಂಬರು ಕೂಡ ಹಾಳಾಗುತ್ತಿದೆ ಎಂದು ವಾಹನ ಸವಾರರ ಆರೋಪವಾಗಿದೆ. ಚೇಂಬರ್ ಬ್ಲಾಕ್ ತೆರವುಗೊಳಿಸುವಂತೆ ಇಲ್ಲಿನ ನಿವಾಸಿಗಳು ನಗರಸಭೆಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಬ್ಲಾಕ್ ಆದಾಗ ತಾತ್ಕಾಲಿಕ ಎಂಬಂತೆ ಕ್ರಮಕೈಗೊಳ್ಳುವ ನಗರಸಭೆ ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆಯಂತೆ.