ಹಾವೇರಿ: ಹಾನಗಲ್ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾದಿಕ್ ಅಗಸಿಮನಿ(29), ಶೋಯೆಬ್ (19) ಬಂಧಿತರು. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 7ಕ್ಕೇರಿದೆ. ಇನ್ನೋರ್ವ ಆರೋಪಿ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಡಿಸ್ಚಾರ್ಜ್ ಆದ ಬಳಿಕ ಬಂಧಿಸುತ್ತೇವೆ. ಸದ್ಯ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ ಎಂದು ಎಸ್‌ಪಿ ಅಂಶುಕುಮಾರ್ ಮಾಹಿತಿ ನೀಡಿದ್ದಾರೆ.
ಬಂಧಿತರಲ್ಲಿ ಸಾದಿಕ್ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಶೋಯೆಬ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ: ಹಾನಗಲ್ ತಾಲೂಕಿನ ಖಾಸಗಿ ಲಾಡ್ಜ್ವೊಂದರ ರೂಂನಲ್ಲಿ ಜ.8ರಂದು ಜೋಡಿಯೊಂದು ತಂಗಿತ್ತು. ಈ ಬಗ್ಗೆ ಕೆಲವರು ನೀಡಿದ ಮಾಹಿತಿ ಮೇರೆಗೆ ಯುವಕರ ಗುಂಪು ಏಕಾಏಕಿ ಲಾಡ್ಜ್ಗೆ ನುಗ್ಗಿತ್ತು. ನೀರು ಬರುತ್ತಿದ್ದೆಯೇ ಎಂದು ಚೆಕ್ ಮಾಡುವ ನೆಪದಲ್ಲಿ ರೂಂ ಬಾಗಿಲು ತೆರೆಯುವಂತೆ ಜೋಡಿಗೆ ಹೇಳಿದ್ದರು. ಬಳಿಕ ರೂಂಗೆ ನುಗ್ಗಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ನಂತರ ಮಹಿಳೆಯನ್ನು ಲಾಡ್ಜ್ನಿಂದ ಹೊರಗೆ ಕರೆದುಕೊಂಡು ಬಂದು ಧಮ್ಕಿ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಹಲ್ಲೆಗೈದವರ ವಿರುದ್ಧ ದೂರು ದಾಖಲಾಗಿತ್ತು.
ಏಳು ಜನ ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಗುರುವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದರು. ಈ ಹೇಳಿಕೆ ಆಧರಿಸಿ, ಐಪಿಸಿ ಸೆಕ್ಷನ್ 376ಡಿ ಅಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: 'ಬಿಜೆಪಿ ನಿಯೋಗಕ್ಕೆ ಹೆದರಿ ಸರ್ಕಾರದಿಂದ ಹಾವೇರಿ ಅತ್ಯಾಚಾರ ಸಂತ್ರಸ್ತೆಯ ಲೀಗಲ್ ಕಿಡ್ನಾಪ್'
ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಹಾವೇರಿಗೆ ಭೇಟಿ ನೀಡಿ ಮಾತನಾಡಿದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ಸಂತ್ರಸ್ತೆಗೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಪೊಲೀಸರ ಮಾಹಿತಿಯಂತೆ ಸಂತ್ರಸ್ತೆ ಶಿರಸಿಯಲ್ಲಿ ವಾಸವಾಗಿದ್ದಾರೆ. ಜ8 ರಂದು ಹಾನಗಲ್ಗೆ ಬಂದು ರೂಂ ಒಂದರಲ್ಲಿ ಪರಿಚಯಸ್ಥರೊಂದಿಗೆ ಸಂತ್ರಸ್ತೆ ಮಾತನಾಡುತ್ತಿದ್ದರು. ಆಗ ಕೆಲವರು ರೂಂ ಬಾಗಿಲು ಬಡಿದು, ಒಳನುಗ್ಗಿ ಹಲ್ಲೆ ಮಾಡಿದ್ದಾರೆ. ನಂತರ ಸಂತ್ರಸ್ತೆಯನ್ನು ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಅವರು ಹೇಳಿದರು. ಸಂತ್ರಸ್ತೆ ಆಘಾತದಲ್ಲಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳಿಗೆ ಸಿಗಬೇಕಾದ ಹಕ್ಕುಗಳಿಗೆ ಧಕ್ಕೆಯಾದಾಗ ಅವರ ರಕ್ಷಣೆಗೆ ಹೋಗುವುದು ಅಲ್ಪಸಂಖ್ಯಾತ ಆಯೋಗದ ಕರ್ತವ್ಯ ಎಂದರು.
ಇದನ್ನೂ ಓದಿ: ಹಾವೇರಿ: ಲಾಡ್ಜ್ನಲ್ಲಿದ್ದ ಜೋಡಿ ಮೇಲೆ ಹಲ್ಲೆಗೈದ ಆರೋಪಿಗಳ ವಿರುದ್ಧ ಗ್ಯಾಂಗ್‌ರೇಪ್ ಪ್ರಕರಣ