ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ಬಸ್ ಚಾಲಕ 50 ವರ್ಷದ ಸದಾನಂದ ಬೆಳಗಾವಿ ಮತ್ತು ಪ್ರಯಾಣಿಕ ರಾಹುಲ್ (22) ಮೃತರಾಗಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಂಗಳೂರಿನಿಂದ ಮೀರಜ್ಗೆ ಹೋಗುತ್ತಿದ್ದ ಸಂದರ್ಭದಲ್ಲಿ ನಸುಕಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಗೊಂಡ ಬಸ್ನೊಳಗಿಂದ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಬಸ್ ಪಲ್ಟಿಯಾಗಿದ್ದರಿಂದ ಚಾಲಕ ಹಾಗೂ ಪ್ರಯಾಣಿಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳಿದಿದ್ದಾರೆ. ಅಪಘಾತದ ಪರಿಣಾಮ ಬಸ್ನ ಗಾಜು ಪುಡಿ ಪುಡಿಯಾಗಿದೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬ್ಯಾಡಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆನೇಕಲ್ನಲ್ಲಿ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಕಂಟೈನರ್ ಪಲ್ಟಿ: ಮಿಲ್ಕಿ ಮಿಸ್ಟ್ ಕಂಟೈನರ್ ರಸ್ತೆ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಹಾಗೂ ಕ್ಲೀನರ್ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿತ್ತು. ಚಾಲಕ ನಿದ್ರಾ ಸ್ಥಿತಿಯಲ್ಲಿ ವಾಹನ ಚಾಲನೆ ಮಾಡಿದ್ದರಿಂದ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ಚಾಲಕ ಕಾರ್ತಿಕೇಯನ್ ಹಾಗು ಕ್ಲೀನರ್ ಉದಯ್ ಕುಮಾರ್ ತಮಿಳುನಾಡಿನ ಈರೋಡಿನವರಾಗಿದ್ದಾರೆ. ಅಪಘಾತಗೊಂಡ ವಾಹನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಮಿಲ್ಕಿಮಿಸ್ಟ್ ಮೊಸರು ಪಾಕೆಟ್ಗಳನ್ನು ವೈಟ್ಫೀಲ್ಡ್ ಮಾರಾಟ ಕೇಂದ್ರಕ್ಕೆ ಸಾಗಿಸುವುದಾಗಿತ್ತು.
ರಾಮನಗರದಲ್ಲಿ ಬೊಲೆರೊ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ: ನಿನ್ನೆ(ಬುಧವಾರ) ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಪ್ಲೈವುಡ್ ತುಂಬಿದ್ದ ಬೊಲೆರೊ ವಾಹನಕ್ಕೆ ಕೆಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಬಸ್ ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ರಾಮನಗರ ತಾಲೂಕಿನ ವಿಜಯಪುರ ಗ್ರಾಮದ ಬಳಿ ನಿನ್ನೆ ಘಟನೆ ನಡೆದಿದೆ. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು.
ಇದನ್ನೂ ಓದಿ: Mangaluru Rape and murder Case: ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್