ಹಾವೇರಿ: ಕೋವಿಡ್ನಿಂದ ಸಂಭವಿಸಿದ ಸಮಸ್ಯೆಗಳು ಅಷ್ಟಿಷ್ಟಲ್ಲ. ಮಾರಕ ವೈರಸ್ನಿಂದಾಗಿ ಅದೆಷ್ಟೋ ಕುಟುಂಬಗಳು ತಮ್ಮ ಮನೆಯ ಆಧಾರಸ್ತಂಭಗಳನ್ನೇ ಕಳೆದುಕೊಂಡು ಸಾಲ ಮಾಡಿ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ನೆರವಿಗೆ ಬಂದ ರಾಜ್ಯ ಸರ್ಕಾರ ವೈರಸ್ನಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿತ್ತು. ಆದರೆ, ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಎರಡು ಕುಟುಂಬಗಳಿಗೆ ಇದುವರೆಗೂ ಪರಿಹಾರದ ಹಣ ಸಿಕ್ಕಿಲ್ಲ.
ಅಧಿಕಾರಿಗಳಿಂದಲೇ ಅಂತ್ಯಕ್ರಿಯೆ: ರಾಣೆಬೆನ್ನೂರು ತಾಲೂಕು ಹಲಗೇರಿ ಗ್ರಾಮದ ಶೋಭಾ ಹಾವನೂರು ಮತ್ತು ರಾಣೆಬೆನ್ನೂರು ನಗರದ ಗೀತಾ ಪುರಾಣಮಠ ಕುಟುಂಬವು ಪರಿಹಾರ ಸಿಗದೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿವೆ. ಹಲಗೇರಿ ಗ್ರಾಮದ ಶೋಭಾ ಪತಿ ಅಶೋಕ್ ಆಗಸ್ಟ್ 22, 2020 ರಂದು ಕೊರೊನಾ ಪಾಸಿಟಿವ್‌ನಿಂದ ತಾಲೂಕಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 23 ರಂದು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ಶವವನ್ನು ಕುಟುಂಬಸ್ಥರಿಗೆ ನೀಡದೆ ಅಧಿಕಾರಿಗಳೇ ಅಂತ್ಯಕ್ರಿಯೆ ನಡೆಸಿದ್ದರು.
ಅರ್ಜಿ ಸಲ್ಲಿಸಲು ಹೋದಾಗ ಆಘಾತ: ಈ ಎರಡು ಕುಟುಂಬಗಳು ಮನೆಯ ಆಧಾರಸ್ತಂಭಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಕೊನೆಗೆ ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಘೋಷಿಸಿದ್ದು, ಈ ಕುಟುಂಬಗಳಿಗೆ ಸ್ವಲ್ಪ ಸಮಾಧಾನ ತಂದಿತ್ತು. ಸರ್ಕಾರ ಪರಿಹಾರ ಘೋಷಿಸುತ್ತಿದ್ದಂತೆ ಈ ಎರಡು ಕುಟುಂಬಗಳು ಅರ್ಜಿ ಸಲ್ಲಿಸಲು ಹೋದಾಗ ಆಘಾತ ಉಂಟಾಗಿತ್ತು.
ಪೋರ್ಟಲ್‌ನಲ್ಲಿ ನೆಗೆಟಿವ್ ದಾಖಲೆ: ಕೊರೊನಾ ಪೋರ್ಟಲ್‌ನಲ್ಲಿ ಅಶೋಕ ಮತ್ತು ಗಂಗಾಧರ ರಿಸಲ್ಟ್ ನೆಗೆಟಿವ್ ಎಂದು ನಮೂದಾಗಿದೆ. ಇದರಿಂದ ಈ ಕುಟುಂಬಗಳಿಗೆ ಪರಿಹಾರ ಮರೀಚಿಕೆಯಾಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಅಂದು ತಾಲೂಕಾಸ್ಪತ್ರೆ ನೀಡಿದ್ದ ಪಾಸಿಟಿವ್ ಪ್ರಮಾಣಪತ್ರಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಆದರೂ ಸಹ ಪೋರ್ಟಲ್‌ನಲ್ಲಿ ನೆಗೆಟಿವ್ ದಾಖಲೆ ನಮೂದಾಗಿದ್ದು ಈ ಕುಟುಂಬಗಳಿಗೆ ಪರಿಹಾರದ ಹಣ ಮಾತ್ರ ಸಿಕ್ಕಿಲ್ಲ.
ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ: "ನಮ್ಮ ಪತಿ ಕೊರೊನಾ ಪಾಸಿಟಿವ್‌ನಿಂದ ತಾಲೂಕಾಸ್ಪತ್ರೆಗೆ ಹಾಜರಾಗಿದ್ದರು. ಈ ವೇಳೆ ಸಿಬ್ಬಂದಿ ನಮಗೆ ಅವರನ್ನು ಸಂಪರ್ಕಿಸಲು ಬಿಡಲಿಲ್ಲ. ಅಲ್ಲದೇ, ನಮ್ಮನ್ನು ಮನೆಗೆ ಹೋಗುವಂತೆ ಹೇಳಿದ್ದರು. ಮನೆಗೆ ಹೋದ ಅರ್ಧ ಗಂಟೆಯ ನಂತರ ಕರೆ ಮಾಡಿ ನಿಮ್ಮ ಪತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಅಲ್ಲಿಗೆ ಹೋದರೆ ಅವರು ನಮಗೆ ಶವವನ್ನೂ ನೀಡಲಿಲ್ಲ. ಬದಲಾಗಿ ಅವರೇ ಅಂತ್ಯಸಂಸ್ಕಾರವನ್ನೂ ಮಾಡಿದರು. ಈಗ ಯಾವುದೇ ಪರಿಹಾರವನ್ನೂ ನೀಡಿಲ್ಲ. ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಹೋದರೆ ಪೋರ್ಟಲ್‌ನಲ್ಲಿ ನೆಗೆಟಿವ್ ರಿಪೋರ್ಟ್ ಬರುತ್ತಿದೆ. ಈಗ ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ" ಎಂದು ಮೃತ ಅಶೋಕ್ ಪತ್ನಿ ಶೋಭಾ ನೋವು ತೋಡಿಕೊಂಡರು.
ಇದನ್ನೂ ಓದಿ: ಗಣಪತಿ ಹಬ್ಬಕ್ಕೆ ಅಡ್ಡ ಬಂದ್ರೆ ಸರಿಯಾದ ಬೆಲೆ ತೆರಬೇಕಾಗುತ್ತದೆ: ಕೆ ಎಸ್ ಈಶ್ವರಪ್ಪ