ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಮೂರು ಕೊರೊನಾ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದ 28 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಯುವತಿಗೆ ಪಿ1690 ರೋಗಿ ಸಂಖ್ಯೆ ನೀಡಲಾಗಿದೆ. ಯುವತಿ ಮುಂಬೈನಲ್ಲಿ ಸಮುದಾಯ ಆರೋಗ್ಯಾಧಿಕಾರಿ ತರಬೇತಿ ಪಡೆಯಲು ಹೋಗಿದ್ದಳು. ತರಬೇತಿ ಮುಗಿಸಿಕೊಂಡು ಮೇ 19 ರಂದು ಬಂದಿದ್ದ ಈಕೆಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ ಗಂಟಲು ದ್ರವವನ್ನ ಅಂದೇ ಪರೀಕ್ಷೆಗೆ ಕಳಿಸಲಾಗಿತ್ತು. ಫಲಿತಾಂಶದಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಇನ್ನು, ಎರಡನೇ ವ್ಯಕ್ತಿ 22 ವರ್ಷದ ಲಾರಿ ಚಾಲಕನಿಗೂ ಕೊರೊನಾ ವಕ್ಕರಿಸಿದೆ. ಈತ ಶಿಗ್ಗಾವಿ ತಾಲೂಕು ಬಂಕಾಪುರ ಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ. ಈ ವ್ಯಕ್ತಿ ಲಾರಿ ಚಾಲಕನಾಗಿದ್ದು, ಮೇ 5 ರಿಂದ 12 ರವರೆಗೆ ಮೂರು ಬಾರಿ ಮುಂಬೈಗೆ ಹೋಗಿ ಬಂದಿದ್ದಾನೆ. ಮುಂಬೈಗೆ ಮಾವಿನಹಣ್ಣು ಮಾರಲು ಹೋಗಿದ್ದ ಸೋಂಕಿತ ಈಗ ಮೆಣಸಿನಕಾಯಿ ತಗೆದುಕೊಂಡು ಬೆಂಗಳೂರಿಗೆ ಹೋಗಿದ್ದಾನೆ ಎನ್ನಲಾಗ್ತಿದೆ. ಲಾರಿ ಚಾಲಕನಿಗೆ ರೋಗಿ ಸಂಖ್ಯೆ ಪಿ1691 ನೀಡಲಾಗಿದೆ.
ಮೂರನೇಯ ಪ್ರಕರಣ ಸವಣೂರಿನಲ್ಲಿ ಪತ್ತೆಯಾಗಿದೆ. ಈ ಹಿಂದೆ ಮುಂಬೈಯಿಂದ ಬಂದಿದ್ದ ಸೋಂಕಿತ ವ್ಯಕ್ತಿಯ ಮನೆಯ ಹತ್ತಿರವಿದ್ದ 55 ವರ್ಷದ ವೃದ್ಧೆಯಲ್ಲಿ ಕೊರೊನಾ ಪತ್ತೆಯಾಗಿದೆ. ವೃದ್ಧೆಗೆ ರೋಗಿ ಸಂಖ್ಯೆ ಪಿ1689 ನೀಡಲಾಗಿದೆ. ಸೋಂಕಿತ ಮಹಿಳೆಗೆ ಈ ಹಿಂದೆ ಮುಂಬೈಯಿಂದ ಬಂದಿದ್ದ ಸೋಂಕಿತ ವ್ಯಕ್ತಿಗಳಾಗಿದ್ದ ಪಿ639 ಮತ್ತು ಪಿ672 ರಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.
ಈ ಹಿಂದೆ ಗ್ರೀನ್ ಝೋನ್ನಲ್ಲಿದ್ದ ಹಾವೇರಿ ಜಿಲ್ಲೆಯಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ 6ಕ್ಕೇರಿದಂತಾಗಿದೆ.