ಹಾವೇರಿ: ಪ್ರಸ್ತುತ ದಿನಗಳಲ್ಲಿ ಎಷ್ಟೇ ಮತದಾನ ಜಾಗೃತಿ ಮೂಡಿಸಿದರೂ, ನೂರಕ್ಕೆ ನೂರರಷ್ಟು ಮತದಾನ ಕನಸಿನ ಮಾತಾಗಿದೆ. ಹೀಗಾಗಿ ಮತದಾನದಿಂದ ಹಿಂದೆ ಸರಿಯದೆ, ತಪ್ಪದೆ ಮತದಾನ ಮಾಡಿ ಎಂದು ಹೇಳುತ್ತಿದ್ದಾಳೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಪುಟ್ಟ ಬಾಲಕಿ ವಚನ.
ಮತದಾನದ ದಿನ ರಜೆ ಘೋಷಣೆ ಮಾಡಿದರೂ ಪ್ರಜ್ಞಾವಂತ ನಾಗರಿಕರೇ ಬ್ಯುಸಿಯಾಗಿ ಬಿಡುತ್ತಾರೆ. ಈ ರೀತಿ ಮಾಡದೇ ಮತದಾನ ಮಾಡಿ ಅಂತಾ ಈ ಬಾಲಕಿ ಹೇಳುತ್ತಿದ್ದಾಳೆ.
ಅಂದ ಹಾಗೆ ವಚನ ಯಾವುದೇ ಪಕ್ಷಕ್ಕೆ ಸೇರಿದವಳಲ್ಲ. ಅವಳಿಗಿನ್ನೂ ಕೇವಲ 6 ವರ್ಷ. ಈ ವಯಸ್ಸಿನಲ್ಲೇ ಬಾಲಕಿ ವಚನ, ಮತದಾನ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾಳೆ. ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ವಚನ ಮತದಾನದ ಮಹತ್ವ ಕುರಿತು ಭಾಷಣ ಮಾಡುತ್ತಾಳೆ. ಅಲ್ಲದೆ ಮತದಾನದ ವಾಗ್ಧಾನ ಸಹ ಮಾಡಿಸುತ್ತಾಳೆ.
ಇಷ್ಟೇ ಅಲ್ಲ, ಕೈಯಲ್ಲಿ ಕರಪತ್ರ ಹಿಡಿದು ಮನೆ ಮನೆಗೆ ತೆರಳಿ ಮತದಾನ ಮಾಡಲೇಬೇಕು ಎಂದು ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾಳೆ. ಇವಳ ಈ ಕಾರ್ಯಕ್ಕೆ ಅವರ ತಂದೆ ಶಿವಬಸಯ್ಯ ಸಾಥ್ ನೀಡಿದ್ದಾರೆ. ಇವಳ ಕಾರ್ಯಕ್ಕೆ ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಸಹ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.