ಹಾವೇರಿ: "ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ ಇದು ನನ್ನ ಮೊದಲ ಸಮಾವೇಶ. ನನ್ನ ಹಣೆಬರಹವನ್ನು ಬರೆಯುವರು ನೀವು. ಮಕ್ಕಳು ವರ್ಷಕ್ಕೊಂದು ಬಾರಿ ಪರೀಕ್ಷೆ ಬರೆಯುತ್ತಾರೆ. ಆದರೆ, ನಾವು ಐದು ವರ್ಷಕ್ಕೊಮ್ಮೆ ಪರೀಕ್ಷೆ ಬರೆಯುತ್ತೇವೆ" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
"ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಯಾಗಿದೆ. ಇನ್ನು ಮಾಡುವ ಕೆಲಸಗಳೇ ಇಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕೆಲಸಗಳನ್ನು ಹುಡುಕಿ ಮಾಡಬೇಕಿದೆ. ನಮ್ಮ ತಾಲೂಕಿಗೆ ಬಹಳ ದಿನಗಳ ನಂತರ ಸಚಿವ ಸ್ಥಾನ ಸಿಕ್ಕಿದೆ. ರಾಜ್ಯದಲ್ಲಿರುವ ಎಲ್ಲದನ್ನೂ ತಂದು ಹಿರೇಕೆರೂರಿಗೆ ಹಾಕಿದ್ದೇನೆ" ಎಂದರು.
"ಕ್ಷೇತ್ರದಲ್ಲಿ ಜಾತಿ ಮೀರಿ ಕೆಲಸ ಮಾಡಿದ್ದೇನೆ. ಮೀಸಲಾತಿ ವಿಚಾರದಲ್ಲಿ ಲಂಬಾಣಿ ಸಮುದಾಯಕ್ಕೆ ತಪ್ಪು ಸಂದೇಶ ನೀಡಲಾಗಿದೆ. ಮೊದಲು ಅವರಿಗೆ ಶೇ.3 ರಷ್ಟು ಮೀಸಲಾತಿ ಇತ್ತು, ಈಗ ಸರ್ಕಾರ ಶೇ.4 ರಷ್ಟು ಮೀಸಲಾತಿ ನೀಡಿದೆ" ಎಂದು ತಿಳಿಸಿದರು. "ವಂಶಪಾರಂಪರ್ಯವಾಗಿ ರಾಜಕಾರಣ ಮಾಡಿಕೊಂಡು ಬಂದವರು ನನ್ನ ವಿರುದ್ದ ಸ್ಪರ್ಧೆ ಮಾಡುತ್ತಿದ್ದಾರೆ. ನಾನು ಮಾಡಿರುವ ಕಾರ್ಯಗಳ ಬಗ್ಗೆ ಒಂದು ಪುಸ್ತಕ ನೀಡಿದ್ದೇನೆ. ಅವರು ಏನು ಕೆಲಸ ಮಾಡಿದ್ದಾರೆ ಎಂದು ಒಂದು ಪೇಪರಿನಲ್ಲಿ ಬರೆದು ಕೊಡಲಿ" ಎಂದು ಹಿರೇಕೆರೂರು ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿ ಯು.ಬಿ.ಬಣಕಾರ್ ಅವರಿಗೆ ಸವಾಲು ಹಾಕಿದರು.
"ತಾಲ್ಲೂಕಿನ ಅಭಿವೃದ್ಧಿ ಮಾಡಿ ಜನರ ಋಣ ತೀರಿಸಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ಮುಂದೆ ನಾನು ಚುನಾವಣೆ ನಿಲ್ಲಬಾರದು ಎಂದು ತೀರ್ಮಾನ ಮಾಡಿದ್ದೇನೆ. ಮತ್ತೊಂದು ಬಾರಿ ಜನರ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಬೇಕು" ಎಂದು ಇದೇ ವೇಳೆ ಮನವಿ ಮಾಡಿದರು. "ಇದುವರೆಗೂ ಹಿರೇಕೆರೂರು ತಾಲೂಕಿಗೆ ಸುಮಾರು 1,300 ಕೋಟಿ ರೂ. ಅನುದಾನ ತಂದಿದ್ದೇನೆ. ತಾಲ್ಲೂಕಿನ 250 ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಿದ್ದೇನೆ" ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಸಮಾವೇಶಕ್ಕೆ ಆಗಮಿಸಿದ್ದ ನಟಿ ಶೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ‘‘ಬಿ.ಸಿ.ಪಾಟೀಲ್ ಅವರು ತಮ್ಮ ಚುನಾವಣೆಯ ಪ್ರಚಾರವನ್ನು ಮಹಿಳಾ ಸಮಾವೇಶದ ಮೂಲಕ ಪ್ರಾರಂಭಿಸಿದ್ದಾರೆ. ಮಹಿಳೆಯರು ಹೆಚ್ಚು ಪ್ರಚಾರ ಮಾಡುತ್ತಾರೆ. ಹೀಗಾಗಿ ಮಹಿಳಾ ಸಮಾವೇಶದ ಮೂಲಕ ಬಿ.ಸಿ.ಪಾಟೀಲ್ ಅವರು ಪ್ರಚಾರ ಆರಂಭಿಸಿದ್ದಾರೆ" ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ಪ್ರೇಮಾ ಮಾತನಾಡಿ, "ನನಗೆ ರಾಜಕೀಯ ಹೆಚ್ಚು ಗೊತ್ತಿಲ್ಲ. ಕೌರವ ಸಿನಿಮಾ ಒಟ್ಟಿಗೆ ಮಾಡಿದ್ದೆವು. ನಮ್ಮ ತಂದೆ ನಿಧನರಾದಾಗ ಬಿ.ಸಿ.ಪಾಟೀಲ್ ಅವರು ಬಂದು ಸಾಂತ್ವನ ಹೇಳಿದ್ದರು. ಹೀಗಾಗಿ ಅವರ ಮೇಲಿನ ಗೌರವದಿಂದ ನಾನು ಇಲ್ಲಿಗೆ ಬಂದಿದ್ದೇನೆ" ಎಂದರು.
ಇದನ್ನೂ ಓದಿ: ಶಾಸಕರ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ: ಪ್ರಕರಣ ದಾಖಲು