ಹಾವೇರಿ: ಜಮೀನಿನಲ್ಲಿ ಬೆಳೆದು ನಿಂತಿದ್ದ ಈರುಳ್ಳಿ ಬೆಳೆಯನ್ನು ರಾತ್ರಿ ವೇಳೆ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಯಲಗಚ್ಚ ಗ್ರಾಮದಲ್ಲಿ ನಡೆದಿದೆ. ರೈತ ಮಾದೇವಪ್ಪ ಹಳೇರಿತ್ತಿ ಬೆಳೆ ಕಳೆದುಕೊಂಡಿದ್ದಾರೆ.
ಮಾದೇವಪ್ಪ ತಮ್ಮ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಜಮೀನಿನಲ್ಲಿದ್ದು ಬೆಳೆಯನ್ನು ಜೋಪಾನ ಮಾಡಿದ್ದರು. ವಿದ್ಯುತ್ ಕಣ್ಣಾಮುಚ್ಚಾಲೆಯ ನಡುವೆಯೂ ಕಷ್ಟಪಟ್ಟು ಬೆಳೆ ಬೆಳೆದಿದ್ದರು.
ಕಳೆದ ಕೆಲವು ದಿನಗಳ ಹಿಂದಷ್ಟೇ ಈರುಳ್ಳಿ ಬೆಳೆಯ ಮೊದಲ ಹಂತದ ಕಟಾವು ಮಾಡಿದ್ದ ಮಾದೇವಪ್ಪ, ಬೆಂಗಳೂರಿನ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ಮೂರೂವರೆ ಸಾವಿರ ರೂಪಾಯಿಯಂತೆ ಮಾರಾಟ ಮಾಡಿದ್ದರು. ಜಮೀನಿನಲ್ಲಿ ಸುಮಾರು 50 ರಿಂದ 60 ಸಾವಿರ ರೂಪಾಯಿ ಈರುಳ್ಳಿ ಬೆಳೆ ಇತ್ತು. ಈರುಳ್ಳಿ ಕಳ್ಳತನ ಮಾಡುವ ಅನುಮಾನವಿದ್ದ ರೈತ ಪ್ರತಿದಿನ ರಾತ್ರಿ ಜಮೀನಿನಲ್ಲೇ ಮಲಗುತ್ತಿದ್ದರು. ಆದರೆ ರೈತ ಇನ್ನೊಂದು ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮಷಿನ್ಗೆ ಹಾಕಿಸಿ ಅದನ್ನು ಕಾಯಲು ಅಲ್ಲಿಯೇ ಮಲಗಿಕೊಂಡಿದ್ದರು. ಇದನ್ನು ಗಮನಿಸಿದ ಕಳ್ಳರು ರಾತ್ರಿ ಜಮೀನಿಗೆ ನುಗ್ಗಿ ಈರುಳ್ಳಿ ಕಳ್ಳತನ ಮಾಡಿದ್ದಾರೆ.
ದೊಡ್ಡ ದೊಡ್ಡ ಗಾತ್ರದ ಈರುಳ್ಳಿಗಳು ಕಳ್ಳತನವಾಗಿವೆ. ಮಾದೇವಪ್ಪ ಮುಂಜಾನೆ ಜಮೀನಿಗೆ ಹೋಗಿ ನೋಡಿದಾಗ ಬೆಳೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನಂತರ ಅವರು ಗುತ್ತಲ ಪೊಲೀಸ್ ಠಾಣೆಗೆ ತೆರಳಿ ಈರುಳ್ಳಿ ಕಳ್ಳತನ ಆಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾದೇವಪ್ಪ, ಘಟನೆ ನಡೆದ ರಾತ್ರಿ ಮೆಕ್ಕೆಜೋಳ ಕಾಯಲು ಮಲಗಿದ್ದೆ. ಅವತ್ತು ಈರುಳ್ಳಿ ಕಿತ್ತಿದ್ದಾರೆ. ಎಷ್ಟು ಮಂದಿ ಬಂದಿದ್ದರೋ ಗೊತ್ತಿಲ್ಲ. ಎರಡು ಎಕರೆಯಲ್ಲಿ ಬೆಳೆ ಬೆಳೆದಿದ್ದೆ. ರಾತ್ರಿ ಬಂದು ನಾನೇ ಇಲ್ಲಿ ಮಲಗಿಕೊಳ್ಳುತ್ತಿದ್ದೆ. ಹಗಲು ಇರುತ್ತೇನೆ, ರಾತ್ರಿಯೂ ಇರುತ್ತೇನೆ. ಆದರೆ ಅವತ್ತು ಒಂದು ರಾತ್ರಿ ಇರಲಿಲ್ಲ. ಬೆಳಗ್ಗೆದ್ದು ಹೊಲಕ್ಕೆ ಬರುವಾಗ ಕಳ್ಳತನ ಆಗಿರುವುದು ತಿಳಿದುಬಂತು ಎಂದರು.
ಇದನ್ನೂ ಓದಿ: ಎರಡು ಕುಟುಂಬಗಳ ನಡುವೆ ಆಸ್ತಿ ವಿವಾದ.. ಒಂದು ಗುಂಪಿನಿಂದ 12 ಎಕರೆ ಬೆಳೆ ನಾಶ ಆರೋಪ