ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಮತ್ತು ಹಾನಗಲ್ ತಾಲೂಕಿನ ಆಡೂರಿನಲ್ಲಿ ಆಯುಧ ಪೂಜೆ ದಿನ ಕಾರ್ಣಿಕೋತ್ಸವ ನಡೆಯುತ್ತದೆ. ದೇವರಗುಡ್ಡದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ ನಾಗಪ್ಪ ಗೊರವಪ್ಪ ಕಾರ್ಣಿಕ ನುಡಿದ.
ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ವರ್ಷದ ಭವಿಷ್ಯ ವಾಣಿಯನ್ನು ಗೊರವಪ್ಪ ನುಡಿದಿದ್ದು, ಇದನ್ನು ಕಾರ್ಣಿಕ ನುಡಿ ಎನ್ನುತ್ತಾರೆ. ದೇವರಗುಡ್ಡದಲ್ಲಿ ಗೊರವಪ್ಪ ನುಡಿದ ಭವಿಷ್ಯವನ್ನು ಸಾಕ್ಷಾತ್ ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿ ಎಂಬುದು ಭಕ್ತರ ನಂಬಿಕೆ. ಅತಿವೃಷ್ಟಿಯಿಂದ ಮನುಷ್ಯ ಕುಲ ಕಂಗಾಲಾಗುತ್ತದೆ ಎಂದು ಗೊರವಯ್ಯ ಕಾರ್ಣಿಕ ಹೇಳಿದ್ದಾನೆ.ಕಾರ್ಣಿಕ ಕಟ್ಟೆಯಲ್ಲಿ ಬಿಲ್ಲನೇರಿ ನಾಗಪ್ಪ ಎಂಬ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.
ಈ ಸಂದರ್ಭದಲ್ಲಿ ಅಗಡಿ ಅಕ್ಕಮಠದಶ್ರೀಗಳು ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತರು ಪ್ರಸ್ತುತ ವರ್ಷ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದರು. ತದೇಕಚಿತ್ತದಿಂದ ಕಾರ್ಣಿಕ ಕೇಳಿದ ಭಕ್ತರು ಶ್ರೀಗಳು ಗೊರವಪ್ಪ ಕಾರ್ಣಿಕ ನುಡಿಯುತ್ತಿದ್ದಂತಲೇ ಅದನ್ನ ವಿಶ್ಲೇಷಣೆ ನಡೆಸಿದರು.
ವರ್ಷದಲ್ಲಿ ಒಮ್ಮೆ ನಡೆಯುವ ಈ ಕಾರ್ಣಿಕೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಮುಂಜಾನೆಯಿಂದಲೇ ಮಾಲತೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಭಿಷೇಕಗಳನ್ನು ನಡೆಸಲಾಯಿತು. ಆಯುಧ ಪೂಜೆಯ ದಿನದಂದು ನಡೆಯುವ ಈ ಕಾರ್ಣಿಕೋತ್ಸವಕ್ಕೆ ಹಾವೇರಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.