ಹಾವೇರಿ : ರಾಜ್ಯದಲ್ಲಿ ದೊಡ್ಡ ಪ್ರಮಾಣದ ಮಳೆಯಾಗುತ್ತಿದೆ. ಇದುವರೆಗೆ 40 ಜನ ಸಾವನ್ನಪ್ಪಿದ್ದಾರೆ. ಆದರೆ ಕಾಂಗ್ರೆಸ್‌ನವರಿಗೆ ಈ ಕಡೆ ಲಕ್ಷ್ಯವಿಲ್ಲ. ಕೇವಲ ಅವರವರ ಗದ್ದಲದಲ್ಲಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಇಷ್ಟಾದರೂ ಸರ್ಕಾರ, ಸಚಿವರು ಜನರ ಸಮಸ್ಯೆ ಆಲಿಸಲು ಹೋಗಿಲ್ಲ ಎಂದು ಬೊಮ್ಮಾಯಿ ಆರೋಪಿಸಿದರು. ಕಷ್ಟದಲ್ಲಿರುವ ರೈತರಿಗೆ, ಮನೆ ಕಳೆದುಕೊಂಡ ಬಡವರಿಗೆ ನೈತಿಕ ಧೈರ್ಯ ಹೇಳುವ ಕೆಲಸವನ್ನ ರಾಜ್ಯಸರ್ಕಾರ ಮಾಡಿಲ್ಲ. ಅವರು ತಮ್ಮ ಗೊಂದಲದಲ್ಲಿದ್ದಾರೆ. ಸಿಎಲ್ಪಿ ಮೀಟಿಂಗ್ ಗೊಂದಲ, ಸಚಿವ ಸಂಪುಟದ ಗೊಂದಲ ಸೇರಿದಂತೆ ಸರ್ಕಾರವೇ ಗೊಂದಲದಲ್ಲಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಮಂಗಳವಾರ ಹಾವೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಒಬ್ಬ ಸಿಎಂ ಪ್ರತಿನಿಧಿಸುವ ಜಿಲ್ಲೆ ಎಲ್ಲ ಸೂಚ್ಯಂಕಗಳಲ್ಲಿ ಹಿಂದಿದೆ ಎಂದು ಆರೋಪಿಸಿದ್ದಾರೆ. ಆದರೆ, ಈ ಸೂಚ್ಯಂಕ ಈಗಿನದ್ದಲ್ಲ. ಐದು ವರ್ಷಗಳ ಹಿಂದಿನ ಸೂಚ್ಯಂಕ ಇದಾಗಿದೆ. ಇದು ಅವರ ಅಧಿಕಾರಿದಲ್ಲಿನ ಸೂಚ್ಯಂಕವಾಗಿದೆ. ಇದರ ಬಗ್ಗೆ ನನಗೆ ಜ್ಞಾನವಿದ್ದಿದ್ದರಿಂದಲೇ ನಾನು ಆರೋಗ್ಯ ಮತ್ತು ಶೈಕ್ಷಣಿಕೆ ಅಭಿವೃದ್ದಿಗೆ ಸಾಕಷ್ಟು ಪ್ರಮಾಣದ ಅನುದಾನ ನೀಡಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ ಸದಾ ಗೊಂದಲ ಮಾಡಿಕೊಂಡೇ ಬಂದಿದೆ: ಹಾವೇರಿ ಜಿಲ್ಲೆ ಹಿಂದುಳಿದಿದೆ ಎನ್ನುತ್ತೀರಲ್ಲ. ಇಲ್ಲಿಗೆ ಬಿಡುಗಡೆಯಾಗಿದ್ದ ಮೆಡಿಕಲ್ ಕಾಲೇಜನ್ನ ಗದಗಕ್ಕೆ ವರ್ಗಾವಣೆ ಮಾಡಿದ್ದೇಕೆ? ಎಂದು ಬೊಮ್ಮಾಯಿ ಪ್ರಶ್ನಿಸಿದರು. ನಾನು ನೀಡಿದ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಿದರೆ ಇವೆಲ್ಲ ಸೂಚ್ಯಂಕಗಳಲ್ಲಿ ಹಾವೇರಿ ಮೇಲಿನ ಸ್ಥಾನ ಹೊಂದಲಿದೆ ಎಂದು ಬೊಮ್ಮಾಯಿ ತಿಳಿಸಿದರು. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಬೂಟಾಟಿಕೆ ಮಾಡುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸದಾ ಗೊಂದಲ ಮಾಡಿಕೊಂಡೇ ಬಂದಿದೆ. ಹಿಂದಿನ ಸರ್ಕಾರವಿದ್ದಾಗ ಸಹ ಪ್ರಣಾಳಿಕೆಯಲ್ಲಿ ಹೇಳಿ ಮೋಸ ಮಾಡಿದರು. ಮೊನ್ನೆ ಸಹ ಸ್ಪಷ್ಟತೆ ಇಲ್ಲ. ಅವರಲ್ಲಿ ಕೆಲವರು ಮಾಡುತ್ತೇವೆ, ಕೆಲವರು ಮಾಡುವುದಿಲ್ಲ ಎಂದು ಹೇಳಿದ ವಿಡಿಯೋಗಳೇ ನಮ್ಮತ್ರ ಇವೆ. ಕಾಂಗ್ರೆಸ್‌ನವರ ಜೊತೆ ಈ ವಿಷಯದಲ್ಲಿ ಪಾಠ ಕಲಿಯಬೇಕಾಗಿಲ್ಲ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.
ಕೇಂದ್ರ ಸಚಿವ ನಾರಾಯಣಸ್ವಾಮಿ ಸದ್ಯದ ಸ್ಥಿತಿ ಹೇಳಿದ್ದಾರೆ. ನಾವು ಇದನ್ನು ವಿಧೇಯಕ ಮಾಡಬೇಕು ಎಂದು ಅವಾಗ್ಲೆ ಹೇಳಿದ್ದೆವು ಎಂದು ಬೊಮ್ಮಾಯಿ ತಿಳಿಸಿದರು. ಅದರಲ್ಲಿ ಮೊದಲಿನಿಂದಲೂ ಅವರು ವಿರೋಧಿಯಾಗಿರುವ ಕಾಂಗ್ರೆಸ್‌ನವರ ಬಣ್ಣ ಈಗ ಬಯಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಶಾಸಕರು ಮತ್ತು ಸಚಿವರ ನಡುವೆ ಸಮನ್ವಯತೆ ಇಲ್ಲದ್ದು ಸ್ಪಷ್ಟ: ಮೆಡಿಕಲ್ ಕಾಲೇಜ್‌ಗಳ ಅವ್ಯವಹಾರ,ಎಸ್ಐಟಿ ತನಿಖೆ ನೀಡಲಿ. ಯಾವುದೇ ತೊಂದರೆಯಿಲ್ಲ. ಅವರ ಸಚಿವರೇ ಈ ಕಾರ್ಯಗಳಿಗೆ ಅನುಮೋದನೆ ನೀಡಿದ್ದಾರೆ. ಎಸ್ಐಟಿ ತನಿಖೆಗೆ ನೀಡಲಿ. ತಪ್ಪಿತಸ್ಥರ ಮೇಲೆ ಕ್ರಮ ಆಗಲಿ ಎಂದು ಬೊಮ್ಮಾಯಿ ಒತ್ತಾಯಿಸಿದರು. ಕಾಂಗ್ರೆಸ್ ಸಿಎಲ್ಪಿ ಮೀಟಿಂಗ್‌ನಲ್ಲಿ ಏನಾಗಿದೆ ಎಂಬುದು ಅವರ ಪಕ್ಷದ ಆಂತರಿಕ ವಿಚಾರ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಿಎಂ, ಡಿಸಿಎಂ ಸಚಿವ ಸಂಪುಟ ರಚಿಸುವ ಕುರಿತಂತೆ ಗೊಂದಲದಲ್ಲಿದೆ. ಶಾಸಕರು ಮತ್ತು ಸಚಿವರ ನಡುವೆ ಸಮನ್ವಯತೆ ಇಲ್ಲದ್ದು ಸ್ಪಷ್ಟವಾಗಿದ್ದು, ಅದಕ್ಕಾಗಿ ಪತ್ರ ಬರೆದಿದ್ದಾರೆ. ಅದಕ್ಕಾಗಿ ಮೀಟಿಂಗ್ ಇರುವುದು. ಈ ಮೀಟಿಂಗ್ ನಡೆದಿರುವುದೇ ಗೊಂದಲ ಇರುವುದರಿಂದ. ಇಲ್ಲ ಎಂದರೆ ಹೈಕಮಾಂಡ್ ಯಾಕೆ ಬುಲಾವ್ ಮಾಡುತ್ತಿತ್ತು ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಯಾವ ಶಾಸಕರು ಸಮಾಧಾನವಾಗಿಲ್ಲ: ಬಹಳ ದೊಡ್ಡ ಪ್ರಮಾಣದ ಭಿನ್ನಾಭಿಪ್ರಾಯ ಶಾಸಕರು ಮತ್ತು ಸಚಿವರ ನಡುವೆ ಇದೆ. ಈ ವರ್ಗಾವಣೆ ದಂಧೆ, ಭ್ರಷ್ಟಾಚಾರದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಯಾವ ಶಾಸಕರು ಸಮಾಧಾನವಾಗಿಲ್ಲ. ಇದು ಯಾವುದು ಸರಿಯಾಗಿಲ್ಲ. ಸಿಎಂ ಸಿದ್ದರಾಮಯ್ಯ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಇದು ಬಹಳಷ್ಟು ದಿನ ಇರುವುದಿಲ್ಲ. ಹಿರಿಯ ಶಾಸಕರಿಗೆ ಈ ರೀತಿಯಾದರೆ ಹೊಸ ಶಾಸಕರ ಪರಿಸ್ಥಿತಿ ತೀವ್ರವಾದ ಶೋಚನೀಯ ಪರಿಸ್ಥಿತಿ ಇದೆ. ಕಾಂಗ್ರೆಸ್ ಸರ್ಕಾರ ಆರಂಭದಿಂದ ಗೊಂದಲದಲ್ಲಿದೆ. ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಆಡಳಿತದಲ್ಲಿ ಅನುದಾನ ನೀಡುವುದರಲ್ಲಿ ಸಹ ಗೊಂದಲ ಇದೆ ಎಂದು ಮಾಜಿ ಸಿಎಂ ಆರೋಪಿಸಿದರು.
ಸರಿಯಾದ ಪ್ರಮಾಣದ ಪರಿಹಾರ ನೀಡುವಂತೆ ಮನವಿ: ಮಣಿಪುರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಾಕಷ್ಟು ದೊಡ್ಡ ಪ್ರಮಾಣದ ದಂಗೆಗಳಾಗಿವೆ. ನಮ್ಮ ಸರ್ಕಾರ ಅದನ್ನ ತಡೆದಿದೆ. ಮಣಿಪುರ ವಿಚಾರ, ದೇಶದ ಅಖಂಡತೆ ವಿಷಯ ಬಂದಾಗ ಎಲ್ಲರೂ ಒಂದಾಗಿ ನಿಲ್ಲಬೇಕು. ಆದರೆ, ಇವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು. ಮಳೆಯಿಂದ ಹಾನಿಯಾದ ಬೆಳೆಗಳಿಗೆ, ಮನೆಗಳಿಗೆ, ಸ್ವತ್ತುಗಳಿಗೆ ಸರಿಯಾದ ಪ್ರಮಾಣದ ಪರಿಹಾರ ನೀಡುವಂತೆ ಬೊಮ್ಮಾಯಿ ಮನವಿ ಮಾಡಿದರು.
ಇದನ್ನೂ ಓದಿ: CM Siddaramaiah: ಬೇಕೆಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ, ಹುಷಾರಾಗಿರಿ: ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು