ಹಾವೇರಿ: ಬಾಲಕ ತೇಜಸ್ ಗೌಡ ಕೊಲೆ ಪ್ರಕರಣದ ಪೊಲೀಸರ ತನಿಖೆಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ತಿಳಿಸಿದಂತೆ ಈ ಕೊಲೆ ಹಿಂದೆ ಕೇವಲ ಅಪ್ರಾಪ್ತ ಬಾಲಕ ಮತ್ತು 20 ವರ್ಷದ ರಿತೀಶ್ ಆರೋಪಿಗಳು ಮಾತ್ರ ಇಲ್ಲ. ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಅವರನ್ನು ಬಂಧಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಪ್ರಕರಣ ಮರುತನಿಖೆ ಮಾಡಿ ತಪ್ಪಿತಸ್ಥರನ್ನ ಜೈಲಿಗೆ ಕಳಿಸಬೇಕು.ಇಲ್ಲದಿದ್ದರೆ ತಮ್ಮ ಕುಟುಂಬ ಹೋರಾಟದ ಹಾದಿ ಹಿಡಿಯಲಿದೆ ಎಂದು ಪೋಷಕರು ಎಚ್ಚರಿಕೆ ನೀಡಿದ್ದಾರೆ.
ಹಾವೇರಿಯ ಅಶ್ವಿನಿ ನಗರದ 11 ವರ್ಷದ ತೇಜಸಗೌಡ ಮಾರ್ಚ್ 7 ರಂದು ನಾಪತ್ತೆಯಾಗಿದ್ದ. ಈ ಕುರಿತಂತೆ ಆತನ ತಂದೆ ಜಗದೀಶ್ 8 ರಂದು ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, 11 ರಂದು ತೇಜಸ್ ಗೌಡ ಕೊಲೆಯಾದ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಸುಳಿವು ಬೆನ್ನತ್ತಿದ್ದ ಪೊಲೀಸರು ತೇಜಸ್ ಗೌಡ ಕೊಲೆಯಲ್ಲಿ ಬಾಗಿಯಾದ ಅಪ್ರಾಪ್ತ ಬಾಲಕ ಮತ್ತು ಆತನ ಸಹೋದರ ರಿತೀಶ್‌ನನ್ನ ಬಂಧಿಸಿದ್ದರು.
ಇಬ್ಬರೇ ಕೊಲೆ ಮಾಡಿ ನಂತರ ಶವವನ್ನ ನೀರಿನಲ್ಲಿ ಮುಳುಗಿಸಿದ್ದಾರೆ. ಅಲ್ಲದೆ ಶವವನ್ನು ತಂದು ಮನೆಯ ಹಿತ್ತಲಿನಲ್ಲಿ ಮುಚ್ಚಿದ್ದಾರೆ. ನಂತರ ಶವದ ವಾಸನೆ ಬರುತ್ತಿದ್ದಂತೆ ಪಾರ್ಕ್‌ನಲ್ಲಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸುತ್ತಾರೆ. ಆದರೆ, ಇಷ್ಟೆಲ್ಲಾ ಮಾಡಲು ಇಬ್ಬರಿಂದ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ಬಾಲಕನ ತಂದೆ ಜಗದೀಶ್.
ಪೊಲೀಸರು ಈ ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಬೇಕು ಇದರ ಹಿಂದೆ ಕಾಣದ ಕೈಗಳಿವೆ ಎಂದು ಜಗದೀಶ್ ಒತ್ತಾಯ ಮಾಡಿದ್ದಾರೆ.