ರಾಣೆಬೆನ್ನೂರು: ಹೊರ ರಾಜ್ಯಗಳಿಂದ ಕೆಲಸಕ್ಕೆಂದು ಬಂದಿದ್ದ ಸುಮಾರು 52 ಕುಟುಂಬಗಳಿಗೆ ತಾಲೂಕು ಆಡಳಿತದ ವತಿಯಿಂದ ದಿನಸಿ ವಿತರಣೆ ಮಾಡಲಾಯಿತು.
ತಹಸೀಲ್ದಾರ್ ಬಸನಗೌಡ ಕೊಟೂರು ನೇತೃತ್ವದಲ್ಲಿ ರೈಲು ನಿಲ್ದಾಣ ಪಕ್ಕ ವಾಸವಾಗಿದ್ದ ಕುಟುಂಬಗಳಿಗೆ ದಿನಸಿ ವಿತರಣೆ ಮಾಡಲಾಯಿತು. ಬಳಿಕ ಮಾತನಾಡಿದ ಕೊಟೂರು, ಭಾರತ ಲಾಕಡೌನ್ ಆದ ಕಾರಣ ಕೆಲ ಕುಟುಂಬಗಳಿಗೆ ಸ್ವಂತ ಊರಿಗೆ ತೆರಳಲು ಸಾಧ್ಯವಾಗಿಲ್ಲ. ಇದರಿಂದ ಯಾವುದೇ ಕಾರ್ಮಿಕರಿಗೆ ಆಹಾರದ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರದ ನಿರ್ದೇಶನ ಮಾಡಿದೆ. ಈ ಆದೇಶ ಮೇರೆಗೆ ಹೊರ ರಾಜ್ಯದಿಂದ ಬಂದಂತಹ ಕಾರ್ಮಿಕರಿಗೆ ದಿನಸಿ ಮತ್ತು ವಸತಿ ನೀಡಲಾಗಿದೆ.
ಈಗಾಗಲೇ ರಾಣೆಬೆನ್ನೂರು ನಗರಕ್ಕೆ ರೈಲ್ವೆ ಕೆಲಸಕ್ಕೆಂದು ಬಿಹಾರ, ಆಂಧ್ರ ಪ್ರದೇಶದ, ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಬಂದಿರುವ ಸುಮಾರು 50 ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಹಾಲಿನ ಪೌಡರ್ ಸೇರಿದಂತೆ ಊಟಕ್ಕೆ ಬೇಕಾದ ದಿನಸಿ ವಿತರಣೆ ಮಾಡಲಾಗುತ್ತದೆ ಎಂದರು.
ಅಲ್ಲದೆ ಹೊರ ರಾಜ್ಯಗಳಿಂದ ನಗರಕ್ಕೆ ದುಡಿಯಲು ಬಂದಿರುವ ದಿನಗೂಲಿ ಕಾರ್ಮಿಕರಿಗೆ ಮತ್ತು ನಗರದಲ್ಲಿನ ಅಲೆಮಾರಿ ಜನರಿಗೂ ಸಹ ಸರ್ಕಾರದ ವತಿಯಿಂದ ದಿನಸಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.