ಹಾವೇರಿ: ಕರ್ನಾಟಕ ರಾಜ್ಯದ ಬಡವರು, ದಲಿತರು ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪೆಟ್ರೋಲ್ ಬೆಲೆ ₹11ಒ ರುಪಾಯಿಗೂ ಅಧಿಕ ಆಗಿದೆ. ಡಿಸೇಲ್ ಬೆಲೆಯೂ ನೂರರ ಗಡಿ ದಾಟಿದೆ. ಸಿಮೆಂಟ್ ಬೆಲೆ ಏರಿಕೆ ಆಗಿದೆ. ನದಿಯಲ್ಲಿನ ಮರಳು ಕೂಡ ಒಂದು ಲಾರಿಗೆ ₹1 ಲಕ್ಷ ಆಗಿದೆ.
ಎಂ.ಸ್ಯಾಂಡ್ ಬೆಲೆ ಕೂಡ ಗಗನಕ್ಕೇರಿದೆ. ಅಡುಗೆ ಎಣ್ಣೆ, ತೊಗರಿ ಬೇಳೆ ಬೆಲೆ ಕೂಡ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಗೆ ಯಾಕೆ ವೋಟು ಕೊಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ನಿವಾಸದ ಬಳಿ ಮಾಧ್ಯಮಗೋಷ್ಠಿ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯವರು ರೇಷನ್ ಖರೀದಿಗೆ ಹೋಗಿದ್ದಾರಾ? ಮೋದಿ ಮತ್ತು ಬೊಮ್ಮಾಯಿ ದೇಶಕ್ಕೆ ಹಾನಿಕಾರಕ. ಏಳು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದರು.
ಕೊರೊನಾ ಸಮಯದಲ್ಲಿ ಬಿಜೆಪಿ ನಾಯಕರು ಜನರ ಬಾಗಿಲಿಗೆ ಹೋಗಿದ್ದಾರಾ?
ಕೊರೊನಾ ಸಮಯದಲ್ಲಿ ಬಿಜೆಪಿ ಸರ್ಕಾರದ ಯಾವುದೇ ಜನಪ್ರತಿನಿಧಿಗಳು ಜನರ ಮನೆ ಬಾಗಿಲಿಗೆ ಹೋಗಲಿಲ್ಲ. ನಮ್ಮ ಅಭ್ಯರ್ಥಿ ಶ್ರೀನಿವಾಸ ಮಾನೆ ಕೊರೊನಾ ಸಂಕಷ್ಟದ ಕಾಲದಲ್ಲಿ ಜನರ ಮನೆ ಬಾಗಿಲಿಗೆ ಹೋದರು. ಆಕ್ಸಿಜನ್ ವ್ಯವಸ್ಥೆ, ಕಷ್ಟದಲ್ಲಿರುವ ವಿವಿಧ ವರ್ಗದ ಜನರಿಗೆ ಹಣಕಾಸಿನ ನೆರವು ನೀಡಿದ್ದರು. ಮಾನೆಗೆ ಜನರು ಆಪದ್ಭಾಂದವ ಎಂಬ ಹೆಸರು ಕೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಆಗಿರುವ ಶಿವರಾಜ ಸಜ್ಜನರ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿ ಮಾಡಿದ್ದರು ಎಂದು ಆರೋಪಿಸಿದರು.
ಪ್ರಧಾನಿ ಮೋದಿಯವರು ಏಳು ವರ್ಷಗಳಿಂದ ಅಚ್ಚೇ ದಿನ್ ಬರುತ್ತೆ ಅಂದರು. ಆದರೆ, ಉದ್ಯೋಗ ದೊರೆಯುತ್ತಿಲ್ಲ, ಉದ್ಯೊಗ ಖಾತ್ರಿ ಹಣ ಸಿಗ್ತಿಲ್ಲ. ಬಿಜೆಪಿ ಸರ್ಕಾರ ಸುಳ್ಳು ಹೇಳುವ ಭ್ರಷ್ಟ ಸರ್ಕಾರ. ಇಲ್ಲಿನ ಗೆಲುವಿನ ಮೂಲಕ ಸರ್ಕಾರಕ್ಕೆ ಜನರು ಪಾಠ ಕಲಿಸುತ್ತಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ:
ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣೆ ಮುಗಿಯಲಿ ಎಂದು ನಾವು ತಾಳ್ಮೆಯಿಂದ ಇದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಮ್ಮ ಕಾಂಗ್ರೆಸ್ ಸೈನ್ಯ ಇದೆ. ಗಾಂಧಿ ಕುಟುಂಬ ಮಾಡಿದ ತ್ಯಾಗಕ್ಕೆ ಬಿಜೆಪಿಯವರನ್ನ ಒಂದು ಪರ್ಸೆಂಟ್ ಕೂಡ ಹೋಲಿಕೆ ಮಾಡಲು ಆಗೋದಿಲ್ಲ ಎಂದು ಕಿಡಿಕಾರಿದರು.
ನಮ್ಮ ಪಕ್ಷ ಸತ್ತಿಲ್ಲ, ನಮ್ಮ ಪಕ್ಷ ಬದುಕಿದೆ. ಚುನಾವಣೆ ಸಮಯದಲ್ಲಿ ಇಂತಹ ಹೇಳಿಕೆಗಳನ್ನ ದೊಡ್ಡದು ಮಾಡದೇ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಬಿಜೆಪಿ ಚುನಾವಣೆ ಮಾಡಲಿ. ಬಿಜೆಪಿ ಸರ್ಕಾರ ಬಂದ ಮೇಲೆ ಜನರ ಬದುಕು ಬದಲಾಗಿದೆಯಾ ಅನ್ನೋದನ್ನ ಹೇಳಲಿ. ಮತದಾರರು ನೊಂದಿದ್ದೀರಿ. ನಿಮ್ಮ ಮತ ಹಾಕುವ ಮೂಲಕ ಬಿಜೆಪಿಯವರಿಗೆ ಉತ್ತರ ಕೊಡಿ. ಇದು ಸಿಎಂ ಬೊಮ್ಮಾಯಿ ಅವರ ಕ್ಷೇತ್ರ, ಸೋಲಿನ ಭಯ ಕಾಡ್ತಿದೆ. ಸೋಲಿನ ಭಯವನ್ನ ಮುಚ್ಚಿ ಹಾಕಲು ಈ ರೀತಿಯ ಹೇಳಿಕೆ ನೀಡ್ತಿದ್ದಾರೆ ಎಂದು ಹೇಳಿದರು.
ಓದಿ: ಟಿಡಿಪಿ ಕಚೇರಿ, ನಾಯಕರ ಮನೆ ಮೇಲೆ ದಾಳಿ ಖಂಡಿಸಿ 36 ಗಂಟೆಗಳ ಪ್ರತಿಭಟನೆ ಘೋಷಿಸಿದ ಚಂದ್ರಬಾಬು ನಾಯ್ಡು