ಹಾವೇರಿ : ರಮೇಶ ಜಾರಕಿಹೊಳಿ ರೆಸಾರ್ಟ್ ರಾಜಕಾರಣ ಮತ್ತು ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಈ ಕುರಿತಂತೆ ಮಾಧ್ಯಮದಲ್ಲಿ ನೋಡಿರುವದನ್ನ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಈ ಕುರಿತಂತೆ ರಮೇಶ ಜಾರಕಿಹೊಳಿ ನನ್ನನ್ನು ಸಂಪರ್ಕಿಸಿಲ್ಲ ಎಂದರು.
ಪಕ್ಷ ವಿರೋಧಿ ಮತ್ತು ಸರ್ಕಾರದ ವಿರುದ್ಧ ಹೇಳಿಕೆ ನೀಡದಂತೆ ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಹೇಳಿದ್ದಾರೆ. ಹೇಳಿದ ಮೇಲೆಯೂ ಸಹ ಅವರು ಆರೋಪ ಮಾಡಿದರೆ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದಂತೆ. ಅವರ ಮೇಲೆ ಕ್ರಮಕೈಗೊಳ್ಳಲು ಬಿಜೆಪಿ ಹೈಕಮಾಂಡ್ ಮತ್ತು ಪದಾಧಿಕಾರಿಗಳಿದ್ದಾರೆ ಎಂದರು.
ಈಗ ಕೋವಿಡ್ ಸಮಸ್ಯೆ ಇದೆ, ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದೇವೆ. ಮೂರನೇ ಅಲೆ ಸಾಧ್ಯತೆ ಇದ್ದು ಅದರ ಬಗ್ಗೆ ಮುಂಜಾಗ್ರತೆ ಕೈಗೊಳ್ಳುವ ಅವಶ್ಯಕತೆ ಇದೆ. ಇದು ರಾಜಕಾರಣ ಮಾಡುವ ವೇಳೆಯಲ್ಲ. ರಾಜಕಾರಣಕ್ಕೆ ಬೇಕಾದರೆ ಬೇರೆ ಸಮಯ ನಿಗದಿ ಮಾಡೋಣ. ಈಗ ನಮ್ಮ ನಡೆ ರೈತರ ಸಂಕಷ್ಟ ಮತ್ತು ಕೋವಿಡ್ ನಿಯಂತ್ರಣ ಮೇಲಿದೆ ಎಂದು ಬಿ.ಸಿ. ಪಾಟೀಲ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ ಸಿ.ಎಂ. ಯಡಿಯೂರಪ್ಪ ಮಗ ವಿಜೇಯಂದ್ರನ ಮೇಲೆ ಮಾಡಿರುವ ಕಿಕ್ ಬ್ಯಾಕ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದೊಂದು ನಿರಾಧಾರ ಆರೋಪ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ, ಅದಕ್ಕೆ ಇದನ್ನ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಶ್ರೀರಾಮಮಂದಿರ ನಿರ್ಮಾಣ ಅಭಿಯಾನದ ಹಣ ಬಿಜೆಪಿ ಪಕ್ಷ ಬಳಸಿಕೊಂಡಿಲ್ಲ. ಅದನ್ನ ಜನರು ಸ್ವಯಂಪ್ರೇರಿತರಾಗಿ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ, ಅದರಿಂದಲೇ ಶ್ರೀರಾಮಮಂದಿರ ನಿರ್ಮಾಣವಾಗಲಿದೆ. ಪಿ.ಎಂ. ಕೇರ್ ಖಾತೆಯಲ್ಲಿ ಹಣವಿಲ್ಲ ಎನ್ನುತ್ತಿರುವ ಕಾಂಗ್ರೆಸ್ ವಿರೋಧ ಮಾಡಬೇಕು ಎಂದು ಮಾಡುತ್ತಿದೆ. ಅದರ ಬಗ್ಗೆ ನಾವು ಕಾಂಗ್ರೆಸ್ಗೇಕೆ ಉತ್ತರ ಕೊಡಬೇಕು. ಜನ ಕೇಳಿದರೆ ಲೆಕ್ಕ ನೀಡುತ್ತೇವೆ ಎಂದರು.