ಹಾವೇರಿ : ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಉಳಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ತೂತು ಬಿದ್ದಿರುವ ಹಡಗಿನೊಳಗೆ ನೀರು ಬರ್ತಾಯಿದೆ. ಯಾವಾಗ ಮುಳುಗುತ್ತೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವ್ಯಂಗ್ಯವಾಡಿದ್ದಾರೆ.
‘ಮುಳುಗುತ್ತಿರುವ ಹಡಗು ಕಾಂಗ್ರೆಸ್’
ಮುಳುಗುತ್ತಿರುವ ಹಡಗನ್ನು ಯಾರಾದರೂ ರಕ್ಷಿಸಲಿ ಎಂದು ಕೈಚಾಚುತ್ತಿದ್ದಾರೆ. ಮುಳುಗುತ್ತಿರುವ ಹಡಗಿಗೆ ಹತ್ತುವ ಜನರು ಇಲ್ಲಿ ಯಾರೂ ಇಲ್ಲ. ಹಾಗಾಗಿ, ಯಾವ ಪಾರ್ಟಿಯಲ್ಲಿದ್ದರೂ ಸರಿ, ಒಮ್ಮೆ ಬಂದು ನಮ್ಮನ್ನು ರಕ್ಷಿಸಿ ಎಂದು ಅಂಗಲಾಚುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.
ನಮ್ಮದು ಸ್ಪಷ್ಟ ಧೋರಣೆ
ಮೇಕೆದಾಟು ವಿಚಾರವಾಗಿ ಸಿಎಂ ಯಡಿಯೂರಪ್ಪ ಏನು ಬೇಕೋ ಅದನ್ನು ಮಾಡಿದ್ದಾರೆ. ಕರ್ನಾಟಕ ಸರ್ಕಾರ ಆ ವಿಚಾರದಲ್ಲಿ ಸ್ಪಷ್ಟವಾದ ಧೋರಣೆ ತೋರಿದೆ ಎಂದರು.
‘ಸಿಪಿವೈ ವಿವರಣೆ ಪಡೆದುಕೊಳ್ತೇನೆ’
ಸಚಿವ ಯೋಗೇಶ್ವರ್ ಅಂಬಾರಿ ಹೊರುವ ಹೇಳಿಕೆಯನ್ನು ಯಾವ ರೀತಿ ಹೇಳಿದ್ದಾರೋ ಗೊತ್ತಿಲ್ಲ, ಅದರ ವಿವರಣೆಯನ್ನು ಕೇಳುತ್ತೇನೆ. ನಮ್ಮ ಸರ್ಕಾರ, ಮಂತ್ರಿಗಳು, ಶಾಸಕರು ಮಾಧ್ಯಮಗಳ ಮುಂದೆ ಅನಗತ್ಯವಾಗಿ ಮಾತಾಡಬಾರದು ಎಂದರು.
‘ಸಿಎಂ ಬದಲಾವಣೆಯಿಲ್ಲ’
ನಾಯಕತ್ವದ ಚರ್ಚೆಯನ್ನು ಹಾದಿಬೀದಿಯಲ್ಲಿ ಮಾಡುವಂಥದಲ್ಲ. ಶಾಸಕಾಂಗ ಸಭೆ ಕರೆದು ಮಾತಾಡಬೇಕು. ಯಾರೋ ಒಬ್ಬರು ದಾರಿಯಲ್ಲಿ ಮಾತಾಡಿದರೆ ನಾಯಕತ್ವ ಬದಲಾವಣೆಯಾಗಲ್ಲ ಎಂದು ಯತ್ನಾಳ್ಗೆ ಕಟೀಲು ತಿರುಗೇಟು ನೀಡಿದರು.
‘ಮೋದಿ ಬಗ್ಗೆ ಮಾತಾಡುವ ಮುನ್ನ ಎಚ್ಚರ’
ಕಾಂಗ್ರೆಸ್ನವರು ಪ್ರಧಾನಮಂತ್ರಿಗಳ ಬಗ್ಗೆ ಮಾತಾಡುವಾಗ ಎಚ್ಚರಿಕೆಯಿಂದಿರಬೇಕು. ಮೋದಿಯವರ ಕೆಲಸಗಳಿಗೆ ಮೆಚ್ಚಿ ಜನತೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ನವರ ದುರಹಂಕಾರದ ಮಾತುಗಳಿಂದಲೇ ಲೋಕಸಭೆಯಲ್ಲಿ ಅವರಿಗೆ ವಿಪಕ್ಷದ ಯೋಗ್ಯತೆಯೂ ಸಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಡಿಕೆಶಿ ಭೇಟಿಯಾದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ