ಹಾವೇರಿ: ಸಚಿವ ಕೆ.ಎಸ್.ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿ ದ್ವಜ ಹಾರಿಸುವ ಹೇಳಿಕೆಯನ್ನ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಮರ್ಥನೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶ್ಯಾಡಂಬಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಕೇಸರಿ ಧ್ವಜ ಆರ್ ಎಸ್ ಎಸ್, ಬಿಜೆಪಿಯದ್ದಲ್ಲ. ಕೇಸರಿ ಧ್ವಜ ಹೋರಾಟ, ತ್ಯಾಗದ ಪ್ರತೀಕ. ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸೋದ್ರಲ್ಲಿ ತಪ್ಪೇನಿದೆ.? ಎಂದರು.
ರಾಷ್ಟ್ರಧ್ವಜದ ಬದಲಾಗಿ ಕೇಸರಿ ಧ್ವಜ ಹಾರಿಸ್ತೇನೆ ಅಂತಾ ಈಶ್ವರಪ್ಪ ಹೇಳಿಲ್ಲ ಎಂದ ಅವರು, ಕಾಂಗ್ರೆಸ್ನವರು ರಾಷ್ಟ್ರದ್ರೋಹಿಗಳು, ಈಗ ಕಾಂಗ್ರೆಸ್ನವರಿಗೆ ರಾಷ್ಟ್ರಧ್ವಜದ ಬಗ್ಗೆ ದೊಡ್ಡದಾಗಿ ಗೌರವ ಬಂದಿದೆ ಎಂದು ವ್ಯಂಗ್ಯವಾಡಿದರು.
ಹಿಜಾಬ್ ವಿಚಾರದಲ್ಲಿ ಕಾನೂನು ಉಲ್ಲಂಘನೆ ಮಾಡ್ತಿರೋರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನಿನ್ನೆ ಮತ್ತು ಇವತ್ತು ನಮಗೆ ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಅಂತಾ ಎಲ್ಲರ ಬಾಯಲ್ಲಿ ಬರ್ತಿದೆ. ಹಿಜಾಬ್ ಹಿಂದೆ ಇಸ್ಲಾಮಿಕ್ ಶಕ್ತಿಗಳಿವೆ. ಧರ್ಮದ ಬಗ್ಗೆ ಈ ರೀತಿಯಾದ ಮಾತುಗಳು ಬರ್ತಿರೋದೆ ಇಸ್ಲಾಮಿಕ್. ಶಿಕ್ಷಣ, ಕಾನೂನು, ಸಂವಿಧಾನ ಮುಖ್ಯ ಅಲ್ಲ ಅನ್ನೋದು ಇದರಿಂದ ಗೊತ್ತಾಗ್ತಿದೆ ಎಂದು ಹರಿಹಾಯ್ದರು.
ಹೈಕೋರ್ಟ್ನ ಮಧ್ಯಂತರ ಆದೇಶ ಧಿಕ್ಕರಿಸಿ ಸೊಕ್ಕಿನಿಂದ ಮಾತಾಡ್ತಿದ್ದಾರೆ. ಕಾಲೇಜುಗಳ ಸುತ್ತಮುತ್ತ ನಿಷೇದಾಜ್ಞೆ ಜಾರಿ ಇದೆ. ಆದರೂ ವಿದ್ಯಾರ್ಥಿಗಳು ಮಾತ್ರವಲ್ಲದೇ ಅವರ ಪೋಷಕರು, ಎಸ್ಡಿಪಿಐ, ಪಿಎಫ್ಐ ಸಂಘಟನೆಯವರು ಕಾಲೇಜು ಬಳಿ ಹೋಗಿ ಕಾನೂನು ಉಲ್ಲಂಘನೆ ಮಾಡಿ ಹಿಜಾಬ್ ಬಗ್ಗೆ ಮಾತಾಡ್ತಾರೆ. ಸರ್ಕಾರ ಯಾಕೆ ಇಂಥವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಹಿಜಾಬ್ ಪ್ರಕರಣ: ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
ಅಂತಿಮ ತೀರ್ಪು ಬಂದ ನಂತರವೂ ಇವರು ಹೋರಾಟ ಮಾಡೋರಿದ್ದಾರೆ. ಇವರನ್ನ ಸರ್ಕಾರ ಈಗಲೇ ಹದ್ದು ಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ನಾವೂ ಬೀದಿಗೆ ಇಳಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಆಂಜನೇಯ ಜನ್ಮಸ್ಥಳದ ವಿವಾದ ವಿಚಾರದ ಬಗ್ಗೆ ಮಾತನಾಡಿದ ಮುತಾಲಿಕ್, ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ. ಶಾಸ್ತ್ರೋಕ್ತವಾಗಿ, ವೈಜ್ಞಾನಿಕವಾಗಿ ಅಂಜನಾದ್ರಿಯಲ್ಲೇ ಆಂಜನೇಯನ ಜನ್ಮಸ್ಥಳ ಅನ್ನೋದು ಖಚಿತ ಆಗಿದೆ. ಆಂಧ್ರಪ್ರದೇಶದ ಸಿಎಂ ಸುಮ್ಮನೆ ಗೊಂದಲ ಸೃಷ್ಟಿಸ್ತಿದ್ದಾರೆ. ತಿರುಪತಿಯ ಹಣವಲ್ಲದೇ ಆಂಜನೇಯ ದೇವಸ್ಥಾನ ಅಭಿವೃದ್ಧಿ ಮಾಡಿ ಅದರ ಹಣವನ್ನೂ ಹೊಡೆಯಲು ಮಾಡಿರೋ ಕುಕೃತ್ಯವಿದು ಎಂದು ಗಂಭೀರ ಆರೋಪ ಮಾಡಿದರು.