ಹಾವೇರಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೇ ಆಗ್ತಾರೆ. ಆದರೆ ಯಾವಾಗ ಸಿಎಂ ಆಗುತ್ತಾರೆ ಎಂಬುದನ್ನ ಕಾಲ ನಿರ್ಧರಿಸುತ್ತೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇಂದು ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೇ ಆಗ್ತಾರೆ. ನಮ್ಮ ಪಕ್ಷದ ನಾಯಕರನ್ನ ನಾವು ಸಿಎಂ, ಪಿಎಂ ಅನ್ನದೇ ಬೇರೆ ಪಕ್ಷದವರನ್ನ ಅನ್ನಲು ಆಗುತ್ತಾ. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ, ಕಾಲ ಏನು ನಿರ್ಧರಿಸುತ್ತೋ ಅದರ ಪ್ರಕಾರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ಚಮಚಾಗಿರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗಂಡ ಹೆಂಡತಿ ಸಂಸಾರದಲ್ಲಿ ವ್ಯತ್ಯಾಸಗಳು ಆಗುತ್ತವೆ. ಅವುಗಳನ್ನ ಬೇರೆಯವರ ಮುಂದೆ ಹೇಳಬಾರದು. ಅಂತಹ ಪರಿಸ್ಥಿತಿ ಏನು ಆಗಿಲ್ಲ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ರು, ಮುಂದೇನು ಆಗುತ್ತಾರೆ. ನಮ್ಮ ಪಕ್ಷದ ನಾಯಕರನ್ನು ಸಿಎಂ, ಪಿಎಂ ಅನ್ನದೆ ಬೇರೆ ಪಕ್ಷದವರನ್ನ ಅನ್ನಲು ಆಗುತ್ತಾ. ಇದನ್ನು ಸಹಿಸಿಕೊಳ್ಳಲಾಗದೆ ಈ ರೀತಿಯ ಚಮಚಾಗಿರಿ ಎಂಬ ಹೇಳಿಕೆಯನ್ನು ವಿಶ್ವನಾಥ್ ಅವರು ನೀಡಬಾರದಿತ್ತು. ಅವರು ಬುದ್ಧಿವಂತರು, ವಿಚಾರವಾದಿಗಳು. ಅವರ ಬಾಯಲ್ಲಿ ಅಂಥ ಕೀಳು ಮಾತು ಬರಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ರು.
ನಾನು ಅತೃಪ್ತನೇ ಅಲ್ಲ. ನನ್ನ ಅತೃಪ್ತಿ ಬೇರೆ. ನನ್ನದು ಏಕಾಂಗಿ ಹೋರಾಟ. ನಾನು ಎಲ್ಲೂ ಹೋಗಿಲ್ಲ. ನಾನು ಯಾವಾಗಲೂ ಸಚಿವ ಸ್ಥಾನದ ಆಕಾಂಕ್ಷಿ. ನನ್ನ ತುಳಿಯೋ ಕೆಲಸ ನಡೀತಿದೆ. ಎಲ್ಲಿ ನಾನು ದೊಡ್ಡದಾಗಿ ಬೆಳೆಯುತ್ತೇನೋ ಅನ್ನೋ ಭಯದಿಂದ ತುಳಿಯೋ ಕೆಲಸ ನಡೀತಿದೆ. ಯಾರೂ ಯಾರು ಬೆಳೆಯೋದನ್ನ ತಡೆಯೋಕಾಗೋದಿಲ್ಲ. ಮೇ 23ರ ನಂತರ ಅಲ್ಲೋಲ ಕಲ್ಲೋಲ ವಿಚಾರ. ಕಾದು ನೋಡಿ ಎಂದರು.