ಹಾವೇರಿ: ವೀರಶೈವ ಪರಂಪರೆಯಲ್ಲಿ ಭಕ್ತರು ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ ನೀಡುವುದು ಸಾಮಾನ್ಯ. ಆದರೆ, ಸ್ವಾಮೀಜಿಗಳೇ ಭಕ್ತರನ್ನ ಮಠಕ್ಕೆ ಕರೆದು ಪ್ರಸಾದ ನೀಡುವ ವಿಶೇಷ ಪದ್ಧತಿಯೊಂದು ಹಾವೇರಿಯ ಸಿಂದಗಿ ಮಠದಲ್ಲಿದೆ.
ಸಿಂದಗಿಮಠದ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳ ಸ್ಮರಣೋತ್ಸದ ಪ್ರಯುಕ್ತ ಮಠದಲ್ಲಿ 'ಊರೂಟ' ಎಂಬ ಪದ್ದತಿಯನ್ನ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ಮಠ ವಟುಗಳು ಮನೆಗೆ ಮನೆಗೆ ತೆರಳಿ ಭಕ್ತರನ್ನ ಊರೂಟಕ್ಕೆ ಬರುವಂತೆ ಆಹ್ವಾನಿಸುತ್ತಾರೆ.
ಭಕ್ತರಲ್ಲಿ ದೇವರನ್ನ ಕಾಣುವ ವಟುಗಳು: ಮಠಕ್ಕೆ ಬರುವ ಭಕ್ತರನ್ನ ಮಠದ ವಟುಗಳೇ ಸ್ವಾಗತಿಸುತ್ತಾರೆ. ಅಲ್ಲದೇ ಮಠದ ವಟುಗಳೇ ಭೋಜನ ತಯಾರಿಸಿ ಭಕ್ತರಿಗೆ ಬಡಿಸುತ್ತಾರೆ. ಈ ದಿನ ಮಠಕ್ಕೆ ಈ ಹಿಂದೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಹ ಬರುತ್ತಾರೆ. ಎಲ್ಲ ವಟುಗಳು ಸೇರಿ ಈ ದಿನ ಮಠಕ್ಕೆ ಬರುವ ಭಕ್ತರಲ್ಲಿ ದೇವರನ್ನ ಕಾಣುತ್ತಾರೆ. ಮಠಕ್ಕೆ ಅಂದಾಜು 40 ಸಾವಿರಕ್ಕೂ ಅಧಿಕ ಭಕ್ತರು ಬಂದು ಪ್ರಸಾದ ಸೇವಿಸಿಸುತ್ತಾರೆ.
ಮಠಕ್ಕೆ ಪ್ರಸಾದಕ್ಕೆ ಬರುವ ಭಕ್ತರ ತಟ್ಟೆಯನ್ನು ವಟುಗಳೇ ತೊಳೆಯುತ್ತಾರೆ. ಈ ಪರಂಪರೆಯನ್ನ ಸಿಂದಗಿಮಠದ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳು ಆಚರಿಸಿಕೊಂಡು ಬಂದಿದ್ದಾರೆ. ಅದೇ ಪರಂಪರೆಯನ್ನ ಅವರ ನಂತರ ಕೂಡ ಮಠದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಉತ್ತರ ಕರ್ನಾಟಕದ ಕಡಕ್ ರೊಟ್ಟಿ, ಕರಿಂಡಿ ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನ ಭಕ್ತರಿಗೆ ಉಣಬಡಿಸಲಾಗುತ್ತದೆ. ಭಕ್ತರು ಲಿಂಗೈಕ್ಯ ಶಾಂತವೀರೇಶ್ವರಶ್ರೀಗಳ ಗದ್ದುಗಿಗೆ ನಮಸ್ಕರಿಸಿ ನಂತರ ವಟುಗಳು ಬಡಿಸುವ ಪ್ರಸಾದ ಸ್ವೀಕರಿಸುತ್ತಾರೆ.
ಶಾಂತವೀರೇಶ್ವರ ಶ್ರೀಗಳು ಅನ್ನದಲ್ಲಿ ದೇವರನ್ನ ಕಂಡವರು. ಈಗಾಗಿ ಈ ಪದ್ದತಿ ಹುಟ್ಟುಹಾಕಿದ್ದರು. ಅಂದಿನಿಂದ ಮಠ ದಲ್ಲಿ ನಿತ್ಯ ನೂರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಮಠದಲ್ಲಿ ಕಜ್ಜಾಯ ಪರಂಪರೆ ಸಹ ಇದೆ. ಊರೂಟ ಇರುವಾಗ ಕೆಲ ಗ್ರಾಮಗಳ ಭಕ್ತರು ಕಡಕ್ ರೊಟ್ಟಿ ಸೇರಿದಂತೆ ಸಿಹಿ ಪದಾರ್ಥಗಳನ್ನ ಮಠಕ್ಕೆ ನೀಡುತ್ತಾರೆ.
ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗಿ: ಒಂದೇ ದಿನ 40 ಸಾವಿರ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಠದ ವಟುಗಳು ನೋಡಿಕೊಳ್ಳುತ್ತಾರೆ. ಕಳೆದೆರಡು ವರ್ಷಗಳಿಂದ ಕೊರೊನಾದಿಂದ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಪ್ರಸ್ತುತ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಟುಗಳು ಉಣಬಡಿಸುವ ಪ್ರಸಾದ ಸ್ವೀಕರಿಸಿದರು. ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಊರೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇದನ್ನೂ ಓದಿ: ಟ್ರಕ್ - ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ: ವಿಠ್ಠಲನ ಪಾದ ಸೇರಿದ 4 ಭಕ್ತರು, 40ಕ್ಕೂ ಹೆಚ್ಚು ಜನರಿಗೆ ಗಾಯ!