ಹಾವೇರಿ: ಮಾಗೋಡು ಗೋಮಾಳ ಜಮೀನಿಗಾಗಿ ನಡೆಯುತ್ತಿದ್ದ ಏಳು ವರ್ಷಗಳ ಹೋರಾಟದಲ್ಲಿ ಗ್ರಾಮಸ್ಥರಿಗೆ ಜಯ ಸಿಕ್ಕಿದೆ. ಗೋಮಾಳದ ಜಮೀನು ಮಾಗೋಡು ಗ್ರಾಮದ ಜನರ ಜಾನುವಾರುಗಳಿಗೆ ಸೇರಿದೆ. ಅಲ್ಲದೇ ಮಾಗೋಡು ಗ್ರಾಮದ ಅಕ್ಕಪಕ್ಕದ ಗ್ರಾಮಸ್ಥರು ಇಲ್ಲಿ ಜಾನುವಾರುಗಳನ್ನು ಮೇಯಿಸಬಹುದು ಎಂದು ಹೈ ಕೋರ್ಟ್ ಆದೇಶ ನೀಡಿದೆ.
ರಾಣೆಬೆನ್ನೂರು ತಾಲೂಕಿನ ಚಿಕ್ಕಗ್ರಾಮಗಳಲ್ಲಿ ಒಂದಾದ ಮಾಗೋಡು ಗ್ರಾಮಕ್ಕೆ ಸರ್ವೇ 11ಎ ಮತ್ತು 13 ರಲ್ಲಿ ಸುಮಾರು 261 ಎಕರೆ 11 ಗುಂಟೆ ವಿಸ್ತೀರ್ಣದ ಗೋಮಾಳವಿದೆ. ಈ ಗೋಮಾಳವನ್ನು ಮಾಗೋಡು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಜಾನುವಾರುಗಳ ಆಹಾರಕ್ಕಾಗಿ ಮೀಸಲಾಗಿಟ್ಟಿದ್ದರು. ತಲೆತಲಾಂತರದಿಂದ ಈ ಜಮೀನು ಗೋಮಾಳವಾಗಿದ್ದು, ಅಕ್ಕಪಕ್ಕದ ಗ್ರಾಮಸ್ಥರ ಜಾನುವಾರುಗಳನ್ನು ಮೇಯಲು ಬಿಡಲಾಗುತ್ತಿತ್ತು.
ಆದರೆ ಈ ಗೋಮಾಳದ ಮೇಲೆ ಕೆಐಡಿಬಿ ಅಧಿಕಾರಿಗಳ ಕಣ್ಣುಬಿದ್ದಿದೆ. ಪರಿಣಾಮ ಗೋಮಾಳ ಜಾಗದಲ್ಲಿ ಕೈಗಾರಿಕೆ ಪ್ರಾರಂಭಿಸಲು ಕೆಐಡಿಬಿ ಮುಂದಾಗಿದೆ. ಇದರಿಂದ ಎಚ್ಚೆತ್ತ ಮಾಗೋಡು ಗ್ರಾಮಸ್ಥರು ತಮ್ಮಲ್ಲಿಯೇ ಗೋಮಾಳ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟಕ್ಕೂ ಇಳಿದಿದ್ದರು. 2017ರಲ್ಲಿ ಗ್ರಾಮದ ಎಂಟು ಜನರು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಏಳು ವರ್ಷದ ಫಲವಾಗಿ ಈಗ ಗೋಮಾಳದ ಜಮೀನು ಗೋವುಗಳ ಪಾಲಾಗಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಕಾನೂನು ಇಲಾಖೆಯ ಸೆಕ್ರೆಟರಿಗಳಿಗೆ ನ್ಯಾಯಾಲಯ ಸೂಚನೆ ನೀಡಿದ್ದು, ಗೋಮಾಳದ ಜಮೀನಿನ ತಂಟೆಗೆ ಬರುವುದಿಲ್ಲ ಎಂದು ತಿಳಿಸಿದೆ. ಇದರಿಂದ ಮಾಗೋಡು ಗ್ರಾಮಸ್ಥರ ಕಾನೂನು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಸಮಾಜ ಪರಿವರ್ತನ ಸಮುದಾಯ ಎಸ್ ಆರ್ ಹಿರೇಮಠ ನೇತೃತ್ವದಲ್ಲಿ ಕಳೆದ ಏಳು ವರ್ಷಗಳಿಂದ ವಿವಿಧ ರೀತಿಯ ಹೋರಾಟ ಮಾಡಿ ನಂತರ ಕಾನೂನು ಹೋರಾಟದ ಮೂಲಕ ಜಯಗಳಿಸಿರುವ ಮಾಗೋಡು ಗ್ರಾಮಸ್ಥರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಆನೇಕಲ್ ತಾಲೂಕಿನ 67 ಎಕರೆ ಗೋಮಾಳ ಒತ್ತುವರಿ ತೆರವಿಗೆ ಹೈಕೋರ್ಟ್ ಆದೇಶ