ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದಲ್ಲಿ ಸರಣಿ ಮನೆ ಕಳ್ಳತನ ನಡೆದಿದ್ದು, ಗುರುವಾರ ರಾತ್ರಿ ಖದೀಮರು 7ಕ್ಕೂ ಅಧಿಕ ಮನೆಗಳ್ಳತನ ಮಾಡಿದ್ದಾರೆ. ಗ್ರಾಮದ ಬೀಗಹಾಕಿದ ಮನೆಗಳನ್ನೇ ಖದೀಮರು ಟಾರ್ಗೆಟ್ ಮಾಡಿದ್ದು, ಮನೆಗಳಿಗೆ ನುಗ್ಗಿದಾಗ ಸಿಕ್ಕ ಹಣ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.
ರಾತ್ರಿ ಒಂದು ಗಂಟೆಯಿಂದ ಬೆಳಗ್ಗೆ ಐದು ಗಂಟೆಯವರೆಗೆ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕೃತ್ಯ ಎಸಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದರು. ಬೆರಳಚ್ಚು ಮತ್ತು ಶ್ವಾನದಳದಿಂದ ಕಳ್ಳರ ಜಾಡು ಪತ್ತೆಹಚ್ಚುವ ಕಾರ್ಯ ನಡೆಯಿತು.
ಕೆಲವು ಮನೆಗಳಲ್ಲಿ ಆಭರಣ ಕದ್ದರೆ, ಇನ್ನು ಕೆಲವು ಕಡೆ ಟ್ರಂಕ್‌ಗಳಲ್ಲಿ ಇಟ್ಟಿದ್ದ ಹಣ ಕಳ್ಳತನ ಮಾಡಲಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೆ ಗ್ರಾಮದಲ್ಲಿ ಕಳ್ಳರು ಮೂರು ಮನೆ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಗ್ರಾಮದ ದೇವಸ್ಥಾನದಲ್ಲಿನ ಗಂಟೆಗಳನ್ನು ಸಹ ಕದ್ದಿದ್ದಾರೆ. ಸರಣಿ ಕಳ್ಳತನ ಪ್ರಕರಣಗಳಿಗೆ ಕಾಕೋಳ ಗ್ರಾಮಸ್ಥರು ಆತಂಕ ಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48 ರ ಪಕ್ಕದಲ್ಲಿರುವ ಗ್ರಾಮ ರಾಣೆಬೆನ್ನೂರು ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಒಂದಾಗಿದ್ದು, ಇಲ್ಲಿನ ಮನೆಗಳಲ್ಲಿ ಪದೇ ಪದೇ ಕಳ್ಳತನ ಆಗುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯ ಮತ್ತು ಸ್ಥಳೀಯರ ಬೇಜವಾಬ್ದಾರಿಯಿಂದ ಈ ರೀತಿಯ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರು ಸಹ ಎಚ್ಚರಿಕೆಯಿಂದ ಇರಬೇಕು. ಮನೆಗಳಿಗೆ ಬೀಗ ಹಾಕುವ ಮುನ್ನ ಆಭರಣ ಮತ್ತು ಹಣವನ್ನು ಪೊಲೀಸ್ ಠಾಣೆಯಲ್ಲಿ ಇಡಬೇಕು. ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದರೆ ಕಳ್ಳತನ ಪ್ರಕರಣಗಳನ್ನು ತಡೆಯಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಛೀ ಛೀ.. ಹಲ್ಲುಜ್ಜುವ ಮೊದಲು ಮಗನಿಗೆ ಕಿಸ್ ಮಾಡಬೇಡ ಎಂದಿದ್ದಕ್ಕೆ ಪತ್ನಿಯ ಕತ್ತು ಸೀಳಿದ ಪತಿ!