ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಐತಿಹಾಸಿಕ ಹಿನ್ನೆಲೆ ಇರುವ ಗ್ರಾಮ. ಇಲ್ಲಿಯ ಕಾಂತೇಶ ದೇವಸ್ಥಾನ ವಿಶ್ವಪ್ರಸಿದ್ದಿಯಾಗಿದೆ. ಈ ಗ್ರಾಮದಲ್ಲಿ 135 ವರ್ಷಗಳ ಹಿಂದೆ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಇತ್ತು. ಈ ಶಾಲೆ ಕಳೆದ ಕೆಲವರ್ಷಗಳಿಂದ ಮಳೆಗಾಲದಲ್ಲಿ ಸೋರಲಾರಂಭಿಸಿದೆ. ಮಳೆಯಿಂದ ಶಾಲೆ ಹಾಳಾಗಲಾರಂಭಿಸಿದೆ. ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದೆ.
ಮಳೆಯಿಂದ ಹಾಳಾದ ಶಾಲೆಯೊಳಗೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹೋಗಲು ಹೆದರಲಾರಂಭಿಸಿದ್ದಾರೆ. ಪರಿಣಾಮ ಶಾಲೆಯ ಅಕ್ಕಪಕ್ಕದಲ್ಲಿದ್ದ ಮರಗಳ ನೆರಳಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ, ಕಳೆದ ಎರಡು ಮೂರು ದಶಕಗಳ ಹಿಂದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಾಲೆಯ ದುರಾವಸ್ಥೆ ಕಂಡು ಇದನ್ನು ಸರಿಪಡಿಸುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಹಲವು ಬಾರಿ ಮನವಿ ಸಲ್ಲಿಸಿ ಬೇಸತ್ತ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ದುರಸ್ತಿಗೆ ತಾವೇ ಮುಂದೆ ಬಂದಿದ್ದಾರೆ. ಶಾಲೆ ಹಾಳಾಗುತ್ತಿರುವುದನ್ನ ಕಂಡ ಶಾಲೆ ಹಳೆಯ ವಿದ್ಯಾರ್ಥಿಗಳು ಮಾಜಿ ವಿದ್ಯಾರ್ಥಿಗಳ ಸಂಘ ಕಟ್ಟಿಕೊಂಡು ಶಾಲೆಯ ದುರಸ್ತಿಗೆ ನಿಂತಿದ್ದಾರೆ.
ಶಾಲೆಯಲ್ಲಿ ಕಲಿತುಹೋಗಿ ಉನ್ನತ ಸ್ಥಾನದಲ್ಲಿರುವ ವಿದ್ಯಾರ್ಥಿಗಳು ಸಹಾಯಕ್ಕೆ ಮುಂದಾಗಿದ್ದಾರೆ. ಈ ಶಾಲೆಯಲ್ಲಿ ಕಲಿತ
ವಿದ್ಯಾರ್ಥಿಗಳು ಈಗ ಆರ್‌ಟಿಓ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ವ್ಯಾಪಾರದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ. ಇವರೆಲ್ಲರ ಸಹಾಯಧನ ಸಂಘಕ್ಕೆ ಹರಿದುಬಂದಿದೆ. ಈ ರೀತಿ ಶಾಲೆಯ ದುರಸ್ತಿಗೆ ಸುಮಾರು ಐದುನೂರಕ್ಕೂ ಅಧಿಕ ಮಾಜಿ ವಿದ್ಯಾರ್ಥಿಗಳು ಒಂದು ಕೋಟಿ 18 ಲಕ್ಷ ರೂಪಾಯಿ ಹಣ ನೀಡಿದ್ದಾರೆ.
ಆ ಹಣದಿಂದ ಗ್ರಾಮದಲ್ಲಿರುವ ಹಳೆಯ ವಿದ್ಯಾರ್ಥಿಗಳು ಇದೀಗ ಹಿಂದಿನ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟಿಸಿದ್ದಾರೆ. ಸುಮಾರು ಎಂಟು ಕೊಠಡಿಗಳನ್ನ ಈ ಹಣದಲ್ಲಿ ಕಟ್ಟಲಾಗಿದೆ. ಸುಸಜ್ಜಿತ ಕಟ್ಟಡಕ್ಕೆ ಇದೀಗ ಅಂತಿಮ ಸ್ಪರ್ಷ ನೀಡಲಾಗುತ್ತಿದೆ. ಶಾಲೆ ಕಟ್ಟಡ ಮುಗಿದರೂ ಸಹ ವಿದ್ಯಾರ್ಥಿಗಳ ಸಂಘಕ್ಕೆ ಸಹಾಯಧನ ಹರಿದುಬರುತ್ತಿದೆ. ಹಳೆಯ ವಿದ್ಯಾರ್ಥಿಗಳು ಸಂಘ ಕಟ್ಟಿಕೊಂಡು ಸಹಕಾರ ಇಲಾಖೆ ಅಡಿ ನೊಂದಾಯಿಸಿಕೊಂಡಿದ್ದಾರೆ.
ಈ ವಿದ್ಯಾರ್ಥಿಗಳು 2019ರಲ್ಲಿ ಸಂಘ ರಚಿಸಿಕೊಂಡು ಆರಂಭಿಸಿದ ಶಾಲಾ ಕಟ್ಟಡ ಇದೀಗ ಪೂರ್ಣಪ್ರಮಾಣದಲ್ಲಿ ಸಿದ್ದವಾಗಿದೆ. ಇದೇ 29 ರಂದು ಹಾವೇರಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಈ ಶಾಲೆಯನ್ನ ಲೋಕಾರ್ಪಣೆ ಮಾಡಲಿದ್ದಾರೆ. ಶಾಲಾ ವಿದ್ಯಾರ್ಥಿಗಳ ಸಂಘ ಇದೇ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಸಹ ನಡೆಸುತ್ತಿದೆ.
ಈ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಪ್ರತಿ ತಿಂಗಳು 18 ಸಾವಿರ ರೂಪಾಯಿ ವೆಚ್ಚವನ್ನ ಸಂಘವೇ ಭರಿಸುತ್ತಿದೆ. ಈ ಸಂಘ ಇದೀಗ ಸುತ್ತಮುತ್ತಲ ಗ್ರಾಮಗಳಿಗೆ ಮಾದರಿಯಾಗಿದೆ. ಎಲ್ಲದಕ್ಕೂ ಸರ್ಕಾರ ಕಡೆ ಸಹಾಯ ಬೇಡುವುದಕ್ಕಿಂತ ಸಾರ್ವಜನಿಕರು ಸಹ ಈ ರೀತಿ ಸಹಾಯಕ್ಕೆ ಮುಂದಾದರೆ ಹಲವು ಸಮಸ್ಯೆಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ಈ ಸಂಘದ ವಿದ್ಯಾರ್ಥಿಗಳು.
ಇದನ್ನೂ ಓದಿ : ದಾವಣಗೆರೆ: ಮಾಜಿ ಸಿಎಂ ಎಸ್ ನಿಜಲಿಂಗಪ್ಪ ವ್ಯಾಸಂಗ ಮಾಡಿದ ಶಾಲೆಗೆ ಬೇಕಿದೆ ಕಾಯಕಲ್ಪ