ರಾಣೆಬೆನ್ನೂರು(ಹಾವೇರಿ): ನೀರು ನಿಂತಿದ್ದ ರೇಲ್ವೆ ಕೆಳಸೇತುವೆಯಲ್ಲಿ ಸಿಲುಕಿದ್ದ ಬಸ್‌ನಲ್ಲಿ ಇದ್ದ 55 ಪ್ರಯಾಣಿಕರನ್ನು ರಕ್ಷಿಸಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಹೊರವಲಯದಲ್ಲಿರುವ ದೇವರಗುಡ್ಡ ರೈಲ್ವೆ ಅಂಡರ್ ಬ್ರಿಡ್ಜ್ ನಲ್ಲಿ ನಡೆದಿದೆ.
ರಾತ್ರಿಯಾಗಿದ್ದ ಕಾರಣ ಚಾಲಕ ಕೆಳ ಸೇತುವೆಯಲ್ಲಿ ಸಾರಿಗೆ ಬಸ್ ಅನ್ನು ಚಲಾಯಿಸಿದ್ದಾನೆ. ಸೇತುವೆ ಒಳಗೆ ಬಸ್ ಚಲಿಸುತ್ತಿದ್ದಂತೆ ಮಳೆ ನೀರು ಬಸ್ಸಿನೊಳಗೆ ನುಗ್ಗಿದೆ. ಈ ವೇಳೆ ಬಸ್‌ನಲ್ಲಿದ್ದ 55ಕ್ಕೂ ಅಧಿಕ ಪ್ರಯಾಣಿಕರು ಹೊರಬರಲು ಹರಸಾಹಸಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯರ ನೆರವಿನಿಂದ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ನಿರಂತರ ಮಳೆಯಿಂದ ಅಂಡರ್ ಬ್ರಿಡ್ಜ್‌ನಲ್ಲಿ ನೀರು ತುಂಬಿಕೊಂಡಿತ್ತು. ನೀರು ತುಂಬಿದ್ದರೂ ದಿಕ್ಕು ತೋಚದಂತಾಗಿ ಬಸ್ ದಾಟಿಸಲು ಸಾರಿಗೆ ಬಸ್ ಚಾಲಕ ಪ್ರಯತ್ನಿಸಿದ್ದೆ ಈ ಘಟನೆಗೆ ಕಾರಣ ಎನ್ನಲಾಗಿದೆ. ಸಾರಿಗೆ ಬಸ್ ರಾಣೆಬೆನ್ನೂರಿನಿಂದ ಕನವಳ್ಳಿಗೆ ಪಯಾಣಿಸುತ್ತಿತ್ತು.
ರಾಣೆಬೆನ್ನೂರು ನಗರಠಾಣೆ ಸಿಪಿಐ ಮುತ್ತನಗೌಡ ಗೌಡಪ್ಪಗೌಡರ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವೈಜ್ಞಾನಿಕ ಅಂಡರ್ ಬ್ರಿಡ್ಜ್ ಕಾಮಗಾರಿಯಿಂದ ಮಳೆ ಬಂದಾಗ ನೀರು ತುಂಬಿಕೊಂಡು ಜನರು ಸಂಕಷ್ಟ ಎದುರಿಸುತ್ತಿದ್ದು, ಸೂಕ್ತ ಕೆಳಸೇತುವೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.