ಹಾವೇರಿ: ಜಿಲ್ಲೆಯ ಹಾನಗಲ್ ವಿಧಾನಸಭಾ ಉಪಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವಾಗಿರುವ ಕಾರಣ ಎರಡು ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ ಎಂದು ಸತೀಶ್ ಜಾರಿಕಿಹೊಳಿ ತಿಳಿಸಿದರು. ಜೆಡಿಎಸ್ ಪಕ್ಷ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಂತೆ ಮಾಡಲು ಏನೆಲ್ಲಾ ಅಡತಡೆ ಮಾಡಬೇಕು ಅದನ್ನ ಮಾಡುತ್ತಿದೆ ಎಂದು ಆರೋಪಿಸಿದರು. ಆದರೆ, ಮತದಾರರು ನಮ್ಮ ಜೊತೆ ನಾವು ಆಯ್ಕೆಯಾಗುವುದು ಶತಸಿದ್ಧ ಎಂದು ತಿಳಿಸಿದರು.
ಇದೇ ವೇಳೆ, ಕಾಂಗ್ರೆಸ್ ಮುಖಂಡ ಉಗ್ರಪ್ಪ ಮತ್ತು ಕೆಪಿಸಿಸಿ ವಕ್ತಾರ ಸಲೀಂ ಸಂಭಾಷಣೆ ವಿಚಾರ ಕುರಿತಂತೆ ಮಾತನಾಡಿ, ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಎಲ್ಲ ಪಕ್ಷಗಳಲ್ಲಿ ಈ ತರಹದ ಘಟನೆಗಳು ನಡೆದಿದ್ದು, ಇವೆಲ್ಲಾ ತಾತ್ಕಾಲಿಕ ಮಾತ್ರ ಎಂದು ಅಭಿಪ್ರಾಯಪಟ್ಟರು.
ಇಂತಹ ಘಟನೆಗಳನ್ನು ಮುಂಚಿತವಾಗಿ ಯೋಜನೆ ಮಾಡಿದ್ದಾರೆ ಎನ್ನಲಾಗದು ಎಂದ್ರು. ಇದು ಮುಗಿದ ಅಧ್ಯಾಯವಾಗಿದ್ದು, ಈ ಕುರಿತಂತೆ ತಾವು ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಮುಳುಗುವ ಹಡಗು ಎನ್ನುತ್ತಿರುವ ಬಿಜೆಪಿ ದೇಶದ ತುಂಬಾ ಅಧಿಕಾರದಲ್ಲಿಲ್ಲ, ಬಿಜೆಪಿ ಲೋಕಸಭೆಯಲ್ಲಿ ಅಧಿಕ ಸ್ಥಾನ ಗಳಿಸಿದೆ. ಆದರೆ, ದೇಶದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ ಎಂಬ ವಿಷಯವನ್ನು ಒತ್ತಿ ಒತ್ತಿ ಹೇಳಿದರು.