ಹಾವೇರಿ: ಕೇವಲ ಸಿದ್ದರಾಮಯ್ಯ, ಡಿಕೆಶಿ ಅಷ್ಟೇ ಅಲ್ಲ. ಪಕ್ಷದ ಹಿರಿಯ ನಾಯಕರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ನಗರಸಭೆಯಲ್ಲಿ ತಮ್ಮ ಜನಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಯಕರೆಲ್ಲಾ ಸ್ಪರ್ಧಿಸಿ ರಾಜ್ಯಕ್ಕೆ ಒಂದೂ ಎಂಬ ಸಂದೇಶವನ್ನು ನೀಡಬೇಕು. ಬಿಜೆಪಿಯ ಹಗರಣಗಳ ಮೂಲಕ ಭ್ರಷ್ಟಾಚಾರದ ಬಗ್ಗೆ ಜನ ಅಸಹ್ಯಪಡುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ಐದು ಸಮಿತಿಗಳು ಅಭ್ಯರ್ಥಿಗಳ ಕುರಿತಂತೆ ತೀರ್ಮಾನ ಕೈಗೊಳ್ಳುತ್ತವೆ.
ಕೊನೆಗೆ ಎಐಸಿಸಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದು ಕಾಂಗ್ರೆಸ್‌ನಲ್ಲಿ ಟಿಕೆಟ್ ಪಡೆಯಲು ಸಾಕಷ್ಟು ಪೈಪೋಟಿಯ ಜೊತೆಗೆ ಒತ್ತಡ ಇದೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಮಾಡಿ ರಾಜ್ಯ ಸರ್ಕಾರವನ್ನು ಬೆತ್ತಲೆಗೊಳಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ರೀತಿಯ ಘಟನೆಗಳು ಮುಂದೆ ಆಗಬಾರದು. ಆಗಿದ್ದಲ್ಲಿ ಯಾರೂ ಅದನ್ನು ಸಹಿಸುವುದಿಲ್ಲ. ಮತದಾರ ಪಟ್ಟಿ ತಯಾರಿಕೆಯಲ್ಲಿ ಬಿಜೆಪಿ ದೊಡ್ಡ ಷಡ್ಯಂತ್ರವನ್ನೇ ಹೆಣೆದಿದೆ. ಇದಕ್ಕೆ ಜನರು 2023 ರ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಬಸವನಗೌಡ ಪಾಟೀಲ್ ಯತ್ನಾಳ ಹೇಳಿಕೆ ಬಗ್ಗೆ ಮಾತನಾಡಿದ ಸಲೀಂ, ಯತ್ನಾಳ್ ಯಾವ ಟೈಮಲ್ಲಿ ಏನು ಹೇಳುತ್ತಾರೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಬಿಎಸ್ವೈ ಮತ್ತು ಮಕ್ಕಳು ಅರೆಸ್ಟ್ ಆಗುತ್ತಾರೆ ಎಂದು ಹೇಳಿದ್ದರು. ಅವರ ಹೇಳಿಕೆಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿ ನಾಯಕರು ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ? ಎಂದು ಪ್ರಶ್ನಿಸಿದರು.
ಬಿಜೆಪಿ ಸೋಲಿನ ಹತಾಶೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಮತ ಖದಿಯಲು ಮುಂದಾಗಿದ್ದಾರೆ. ಖೊಟ್ಟಿ ಮತದಾನ ಧೀರರು ಬಿಜೆಪಿಯವರು ಎಂದು ಆರೋಪಿಸಿದರು. ಈ ಕೂಡಲೇ ಅಶ್ವತ್ಥ ನಾರಾಯಣ್ ಬಂಧಿಸುವಂತೆ ಒತ್ತಾಯಿಸಿದಲ್ಲದೇ, ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರು ನಗರದ ಉಸ್ತುವಾರಿ ಸಚಿವರುಗಳ ಮೇಲೆ ಪ್ರಕರಣ ದಾಖಲಿಸಬೇಕು. ಬಿಜೆಪಿಯವರು ಬಿಬಿಎಂಪಿ ಅಷ್ಟೇ ಅಲ್ಲದೇ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಮತ ಕದಿಯಲಿದ್ದಾರೆ. ಈ ಕುರಿತಂತೆ ಮುಖ್ಯನ್ಯಾಯಮೂರ್ತಿಯಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಅಧಿಕಾರಕ್ಕೆ ಬರಲಿದೆ: ಸಲೀಂ ಅಹ್ಮದ್