ಹಾವೇರಿ: ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ಸಾಹಿತಿ ಚಂದ್ರಶೇಖರ್ ಪಾಟೀಲ್ ಅವರು ನಿಧನರಾದರು. ಅವರು ಓದಿದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಚಂಪಾ ಶಾಲೆಗೆ ಬಂದಾಗಿನ ನೆನಪುಗಳನ್ನು ಉಪಾಧ್ಯಾಯರು ನೆನೆದು ಕಣ್ಣೀರು ಹಾಕಿದರು.
ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ 1939 ಜೂನ್ 18ರಂದು ಹತ್ತಿಮತ್ತೂರಿನಲ್ಲಿ ಜನಿಸಿದ ಚಂಪಾ, ಪ್ರಾಥಮಿಕ ಶಿಕ್ಷಣವನ್ನ ಹತ್ತಿಮತ್ತೂರು ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ್ದರು. ನಂತರ ಐದರಿಂದ 10ನೇ ತರಗತಿಯನ್ನ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ಜಿ ಹೆಚ್ ಕಾಲೇಜ್ ಸೇರಿದಂತೆ ಧಾರವಾಡದಲ್ಲಿ ಮುಂದಿನ ವ್ಯಾಸಂಗ ಮಾಡಿದರು.
ಬಂಡಾಯ ಸಾಹಿತಿಯಾಗಿ, ವಿಮರ್ಶಕರಾಗಿ, ನಾಟಕಗಾರರಾಗಿ ಹಲವು ಹೋರಾಟಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮದೇ ಸ್ಥಳೀಯ ಭಾಷೆಯಿಂದ ಸಾಕಷ್ಟು ಗಮನ ಸೆಳೆದಿದ್ದರು. ಅವರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರು ಸಹ ತಮ್ಮ ಸ್ಥಳೀಯ ಭಾಷೆಯನ್ನ ಬಿಟ್ಟಿರಲಿಲ್ಲ. ಹಾವೇರಿಗೆ ಬಂದಾಗಲೆಲ್ಲ ಸಾಹಿತಿ ಸತೀಶ್ ಕುಲಕರ್ಣಿ, ಹಿರಿಯ ಪತ್ರಕರ್ತ ಮಾಲತೇಶ್ ಅಂಗೂರು ಅವರೊಂದಿಗೆ ಚಂಪಾ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರು. ಹಾವೇರಿಗೆ ಬಂದಾಗಲೆಲ್ಲಾ ತಾವು ಓದಿದ ಮುನ್ಸಿಪಲ್ ಹೈಸ್ಕೂಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ವಿದ್ಯಾರ್ಥಿಯಾಗುತ್ತಿದ್ದರು. ಹಾವೇರಿಗೆ ಬಂದಾಗ್ಲೂ ಸಾಹಿತಿ ಸತೀಶ್ ಕುಲಕರ್ಣಿ ಮತ್ತು ಮಾಲತೇಶ್ ಅಂಗೂರು ಸೇರಿದಂತೆ ಸಾಹಿತಿಗಳನ್ನು ಕರೆದುಕೊಂಡು ತಮ್ಮ ಗ್ರಾಮ ಹತ್ತಿಮತ್ತೂರುಗೆ ಹೋಗುತ್ತಿದ್ದರು.
ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ಶ್ರೇಷ್ಠ ಸಾಹಿತಿ ಚಂಪಾ ಅಂತ್ಯಕ್ರಿಯೆ
ಚಂಪಾ ಅಂದರೆ ಮಿಂಚು ಇದ್ದಂಗ ಮಿಂಚು ಬಂದಾಗ ಕತ್ತಲು ಬಣ್ಣ ಕಳೆದುಕೊಳ್ಳುವಂತೆ ಚಂಪಾ ಇದ್ದರು ಎನ್ನುತ್ತಾರೆ ಸಾಹಿತಿ, ಪತ್ರಕರ್ತ ಮಾಲತೇಶ್ ಅಂಗೂರು. ಸಾಹಿತ್ಯ ಲೋಕಕ್ಕೆ ಹೊಸ ಭಾಷ್ಯ ಕೊಟ್ಟ ಸಾಹಿತಿ ಚಂಪಾ ಅಗಲಿಕೆಗೆ ಅಂಗೂರು ಕಂಬನಿ ಮಿಡಿದಿದ್ದಾರೆ. ನೆಲದ ಭಾಷೆಗೆ ಸಾಹಿತ್ಯಿಕ ಸ್ಪರ್ಷ ಕೊಟ್ಟವರು ಚಂದ್ರಶೇಖರ್ ಪಾಟೀಲ್. ಗಂಡುಮೆಟ್ಟಿದ ಉತ್ತರಕರ್ನಾಟಕದ ಸೊಗಡನ್ನ ಅವರು ಎಂದು ಬಿಟ್ಟುಕೊಟ್ಟಿರಲಿಲ್ಲ ಎಂದು ಸ್ಮರಿಸಿದರು. ಮೊನಚು ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದ ಚಂಪಾ ನಿಧನರಾಗಿದ್ದು, ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ ಎಂದು ಹೇಳುವ ಮೂಲಕ ಅಂಗೂರ ಅವರು ಸಂತಾಪ ವ್ಯಕ್ತಪಡಿಸಿದರು.
ಇದೇ ವೇಳೆ ಚಂಪಾ ನಿಧನದಿಂದ ಬಂಡಾಯ ಸಾಹಿತ್ಯದ ದೊಡ್ಡ ಧ್ವನಿ ಅಡಗಿದಂತಾಗಿದೆ. ಚಂಪಾ ನಮಗೆ ಪ್ರತಿರೋಧದ ಧ್ವನಿ ನೀಡಿದವರು. ಬಂಡಾಯದ ಗುರುಗಳು ಎಂದು ಸತೀಶ್ ಕುಲಕರ್ಣಿ ಹೇಳುತ್ತಾರೆ. ಗೋಕಾಕ್ ಚಳವಳಿ ವೇಳೆ ಚಂಪಾ ರಚಿಸಿದ್ದ ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಹಾಡು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅವರ ಬಂಡಾಯ ಲೇಖನ ಸೇರಿದಂತೆ ಅವರ ಸಾಹಿತ್ಯ ಓದಿ ಬೆಳೆದ ಸಾವಿರಾರು ಜನರಿದ್ದಾರೆ. ಅವರಿಂದ ಕನ್ನಡ ಸಾಹಿತ್ಯದ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಸಾಹಿತಿ ಸತೀಶ್ ಕುಲಕರ್ಣಿ ಕಂಬನಿ ಮಿಡಿದರು.