ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಳಗೊಂಡ ಗ್ರಾಮದ ಕಾಗಿನೆಲೆ ಕೆರೆಯಲ್ಲಿ ಗೃಹಿಣಿಯ ಶವ ಅನುಮಾನಾಸ್ಪದ ರೀತಿ ಪತ್ತೆಯಾಗಿತ್ತು. ಈ ಸಾವಿಗೆ ಕೌಟುಂಬಿಕ ಕಲಹ ಕಾರಣ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 1 ರಂದು ಕಾಗಿನೆಲೆ ಕೆರೆಯಲ್ಲಿ ಗೃಹಿಣಿಯ ಶವ ಅನುಮಾನಾಸ್ಪದ ರೀತಿ ಪತ್ತೆಯಾಗಿತ್ತು. ಈ ಕುರಿತಂತೆ ಕಾಗಿನೆಲೆ ಠಾಣೆಯಲ್ಲಿ ಜನವರಿ 28ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು ಎಂದರು.
ಗೃಹಿಣಿ ಮನುಜಾ ಸಾವಿಗೆ ಕೌಟುಂಬಿಕ ಕಲಹ ಕಾರಣವಾಗಿದ್ದು, ಅದು ಆತ್ಮಹತ್ಯೆಯೋ ಅಥವಾ ಕೊಲೆನಾ ಎಂಬುದು ತಿಳಿಯಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನುಜಾ ಪತಿ ಬಸವರಾಜ್ ಮತ್ತು ಆತನ ಚಿಕ್ಕಮ್ಮ ಮುತ್ತವ್ವ ಹಾಗೂ ಸಂಬಂಧಿಕ ಷಣ್ಮುಖಪ್ಪ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮೃತ ಗೃಹಿಣಿ ಮನುಜಾ ಮತ್ತು ಬಸವರಾಜ್ ನಡುವೆ ಅಂತರ್ಜಾತಿ ವಿವಾಹವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಈಗಾಗಲೇ ಓರ್ವ ಸಬ್ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ್ ತಿಳಿಸಿದ್ದಾರೆ.