ರಾಣೆಬೆನ್ನೂರು/ಹಾವೇರಿ: ರಾಣೆಬೆನ್ನೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆ ಯಾವುದೇ ಅಭಿವೃದ್ಧಿ ಕಾಣದೇ, ಸ್ವಚ್ಛತೆಯೂ ಇಲ್ಲದೇ ಅವ್ಯವಸ್ಥೆಗಳ ಆಗರವಾಗಿದೆ.
ತಾಲೂಕಿನ ಚಳಗೇರಿ ಗ್ರಾಮದ ಸರ್ಕಾರಿ ಹೆರಿಗೆ ಆಸ್ಪತ್ರೆ ಮೂಲಸೌಲಭ್ಯಗಳ ಕೊರತೆಯಿಂದ ರೋಗಗ್ರಸ್ಥವಾಗಿದೆ. ಪುಂಡ ಪೋಕರಿಗಳ ಎಣ್ಣೆ ತಾಣವಾಗಿದೆ. ಒಳಗೆ ನೋಡಿದ್ರೆ ಇದು ಆಸ್ಪತ್ರೆ ಹೌದೋ ಅಥವಾ ಪಾಳು ಬಿದ್ದ ಗೋದಾಮೋ ಎಂಬಂತಿದೆ. ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆ ಸಮಯದಲ್ಲಿ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಆಸ್ಪತ್ರೆಯನ್ನು 2005ರಲ್ಲಿ ನಿರ್ಮಿಸಿತ್ತು. ಆದರೆ, ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿಗೆ ಹೆರಿಗೆಗಾಗಿ ಬರುವ ಗರ್ಭಿಣಿಯರು ಪರದಾಡುವಂತಾಗಿದೆ.
ಶೌಚಾಲಯ ಬಾಗಿಲು ಮುರಿದಿದೆ. ಹಾಸಿಗೆಗಳು ಧೂಳು ಹಿಡಿದು ವಾಸನೆ ಬರುತ್ತಿವೆ. ಡಾಕ್ಟರ್ ಹಾಗೂ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಔಷಧಿಗಳನ್ನು ಸರಿಯಾಗಿ ಜೋಡಿಸಿಟ್ಟಿಲ್ಲ. ಆಸ್ಪತ್ರೆ ಆವರಣದಲ್ಲಿ ಸುತ್ತ ಕತ್ತಲಾದರೆ ಸಾಕು ಕುಡಕರು ಕುಡಿದ ಮೇಲೆ ಬಾಟಲಿಗಳನ್ನ ಎಸೆದು ಹೋಗುತ್ತಿದ್ದಾರೆ.