ರಾಣೆಬೆನ್ನೂರು (ಹಾವೇರಿ): ಕೊರೊನಾ ಭಯದ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಾಗೂ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು ಜೂ.25 ರಂದು ಪರೀಕ್ಷೆ ನಡೆಸಲು ಎಲ್ಲಾ ರೀತಿಯ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಕಿಕೊಂಡಿದೆ.
ರಾಣೆಬೆನ್ನೂರು ತಾಲೂಕಿನಲ್ಲಿ ಒಟ್ಟು 4,466 ವಿದ್ಯಾರ್ಥಿಗಳಲ್ಲಿ 2,208 ಗಂಡು ಮಕ್ಕಳು ಮತ್ತು 2,258 ಹೆಣ್ಣು ಮಕ್ಕಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.
ಒಟ್ಟು 15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ನಗರದಲ್ಲಿ 5 ಹಾಗೂ ಗ್ರಾಮೀಣ ಪ್ರದೇಶದಲ್ಲಿ 10 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
ಈ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸ್ ಮಾಡಿಸಲಾಗಿದೆ ಎಂದು ಬಿಇಒ ಎನ್. ಶ್ರೀಧರ ತಿಳಿಸಿದರು. ಪರೀಕ್ಷೆ ಬರೆಯುತ್ತಿರುವ ಪ್ರತಿ ವಿದ್ಯಾರ್ಥಿಗೆ ದಾನಿಗಳು ನೀಡಿರುವ ಎರಡು ಮಾಸ್ಕ್ ನೀಡಲಾಗುತ್ತಿದೆ.
ಸರ್ಕಾರದ ವತಿಯಿಂದ ಯಾವುದೇ ಮಾಸ್ಕ್ ನೀಡಿಲ್ಲ. ಆದರೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ 6 ಲೀಟರ್ ಸಾನಿಟೈಸರ್ ಮತ್ತು ವಿದ್ಯಾರ್ಥಿಗಳನ್ನು ಪರೀಕ್ಷಿಸಲು ಒಂದು ಥರ್ಮೊ ಗನ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.