ರಾಣೆಬೆನ್ನೂರ : ಜೂನ್ ಮೊದಲ ವಾರದಲ್ಲಿಯೇ ಮುಂಗಾರು ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದ್ದು, ರಾಣೆಬೆನ್ನೂರು ನಗರದಲ್ಲಿ ರೈತರು ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದಾರೆ.
ಈ ವಾರದಲ್ಲಿ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಹೆಚ್ಚಿದೆ. ಇದರಿಂದ ರೈತರು ಖುಷಿ ಆಗಿದ್ದಾರೆ. ತಾಲೂಕಿನ ಬಹುತೇಕ ರೈತರು ತಮ್ಮ ಭೂಮಿಗಳನ್ನು ಬಿತ್ತನೆಗೆ ಹದ ಮಾಡಿಟ್ಟುಕೊಂಡಿದ್ದಾರೆ. ಬಿತ್ತನೆ ಮಾಡುವ ಸಲುವಾಗಿ ಬೀಜ ಖರೀದಿ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 54 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಇಲ್ಲಿನ ರೈತರು ಪ್ರಮುಖವಾಗಿ ಮೆಕ್ಕೆಜೋಳ, ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಈ ಬೆಳೆಗಳಿಗೆ ಬೇಕಾದ ಬೀಜಗಳನ್ನು ಖಾಸಗಿ ಅಂಗಡಿ ಸೇರಿದಂತೆ ರೈತ ಸಂಪರ್ಕ ಕೇಂದ್ರಗಳಿಂದ ಖರೀದಿಸುತ್ತಿದ್ದಾರೆ.
ರೈತರಿಗೆ ಈ ಬಾರಿ ಉತ್ತಮ ಕಂಪನಿಯ ಬಿತ್ತನೆ ಬೀಜದ ಬೆಲೆ ಹೊರೆಯಾಗಿದ್ದು, ಪ್ರತಿ ಐದು ಕೆಜಿ ಮೆಕ್ಕೆಜೋಳಕ್ಕೆ 1000ರಿಂದ 1200 ರೂ. ಕೊಟ್ಟು ಖರೀದಿ ಮಾಡಬೇಕಾಗಿದೆ. ಅಲ್ಲದೆ ರಸಗೊಬ್ಬರ ಬೆಲೆ ದುಪ್ಪಟ್ಟಾಗಿದೆ.