ರಾಣೆಬೆನ್ನೂರ: ನಗರದ ಸಿಟಿಎಸ್ ನಂ, 578(ಬ) ಅಂಜುಮನ್ ಸಂಸ್ಥೆಗೆ ಸೇರಿದ ಸ್ಮಶಾನ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮಳಿಗೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ನಗರಸಭೆ ಮುಂದೆ ಧರಣಿ ನಡೆಸಿದರು.
ಸಾರ್ವಜನಿಕ ಸ್ಮಶಾನದ ಜಾಗದಲ್ಲಿ ಯಾವುದೇ ರೀತಿಯ ಕಟ್ಟಡ ಹಾಗೂ ಮಳಿಗೆಗಳನ್ನು ನಿರ್ಮಾಣ ಮಾಡಬಾರದು ಎಂದು ಈ ಹಿಂದೆ ನಗರಸಭೆಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದಲ್ಲದೇ ಬೆಳಗಾವಿಯ ವಕ್ಪ್ ಬೋರ್ಡ್ ಈ ಕುರಿತು ನ್ಯಾಯಾಲಯದ ಗಮನಕ್ಕೆ ತಂದಿತ್ತು. ನಂತರ ಕೋರ್ಟ್ ಕೂಡ ಆ ಜಾಗದಲ್ಲಿ ಯಾವುದೇ ವಾಣಿಜ್ಯ ಮಳಿಗೆಗಳನ್ನು ಕಟ್ಟದೆ, ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತ್ತು. ಆದರೆ, ಅಂಜುಮನ್ ಕಮಿಟಿಯು ನ್ಯಾಯಾಲಯದ ಸೂಚನೆಗೆ ಕಿಂಚಿತ್ತೂ ಬೆಲೆ ಕೊಡದೇ ಮತ್ತೆ ಅಕ್ರಮ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಂತರ ನಗರಸಭೆ ಪೌರಾಯುಕ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದರು. ನಂತರ ಮಾತನಾಡಿದ ಅವರು, ಕೂಡಲೇ ಕಾಮಗಾರಿ ಬಂದ್ ಮಾಡಿಸಲಾಗುವುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಮಿಟಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.