ಹಾವೇರಿ: ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನ ಅಪಹರಣ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ. 98 ವರ್ಷದ ದೇವಕ್ಕ ದುಂಡಣ್ಣನವರ್ ಅಪಹರಣಕ್ಕೆ ಒಳಗಾದ ವೃದ್ಧೆ.
ಐವರು ಸೇರಿಕೊಂಡು ವೃದ್ಧೆ ಅಪಹರಣ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವಕ್ಕ ತನಗೆ ಸಂತಾನವಿಲ್ಲದ ಕಾರಣ ತಮ್ಮ ಜಮೀನನ್ನು ಮಾಣಿಕಪ್ಪ ದುಂಡಣ್ಣನವರ್ ಎಂಬುವವರ ಹೆಸರಿಗೆ ಬರೆದುಕೊಟ್ಟಿದ್ದರು ಎನ್ನಲಾಗಿದೆ.
ಮಾಣಿಕಪ್ಪ ಮತ್ತು ಅವರ ಕುಟುಂಬಸ್ಥರು ಕಳೆದ ಹಲವು ವರ್ಷಗಳಿಂದ ದೇವಕ್ಕಳ ಆರೈಕೆ ಮಾಡುತ್ತಿರುವುದರಿಂದ, ವೃದ್ಧೆ ಆಸ್ತಿಯನ್ನ ಮಾಣಿಕಪ್ಪಗೆ ಬರೆದುಕೊಟ್ಟಿದ್ದಾರೆ. ಈ ಮಧ್ಯೆ ವೃದ್ಧೆಯ ಈ ತೀರ್ಮಾನ ವಿರೋಧಿಸಿದ್ದ ದೇವಕ್ಕಳ ಸಂಬಂಧಿಕರಾದ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ್ ಮತ್ತು ಮಂಜಪ್ಪ ವೃದ್ಧೆಯನ್ನ ಅಪಹರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಾಣಿಕಪ್ಪ ಮತ್ತು ಅವರ ಕುಟುಂಬ ಸದಸ್ಯರು ಜಮೀನಿಗೆ ಕೆಲಸಕ್ಕೆ ಹೋದಾಗ ಆರೋಪಿಗಳು ವೃದ್ಧೆಯನ್ನ ಅಪಹರಿಸಿದ್ದಾರೆ ಎನ್ನಲಾಗಿದೆ. ಮಾಣಿಕಪ್ಪ ಕಳೆದ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ವೃದ್ಧೆಯನ್ನ ಮಾಣಿಕಪ್ಪನ ಕುಟುಂಬಸ್ಥರು ಜೋಪಾನ ಮಾಡಿಕೊಂಡು ಬಂದಿದ್ದರು. ದೇವಕ್ಕಳ ಜಮೀನನ್ನ ಮಾಣಿಕಪ್ಪನ ಕುಟುಂಬಸ್ಥರು ಉಳುಮೆ ಮಾಡಿಕೊಂಡು ಬಂದಿದ್ದರು. ವೃದ್ಧೆಯನ್ನ ಅಪಹರಣ ಮಾಡಿರುವ ಆರೋಪಿಗಳ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೊಂದ ನಾಗರಹಾವಿನ 11 ನೇ ದಿನದ ಕಾರ್ಯದ ವೇಳೆ ಮೈ ಮೇಲೆ ಬಂದ ನಾಗಪ್ಪ.. ವೈರಲ್ ವಿಡಿಯೋ