ರಾಣೆಬೆನ್ನೂರು: ನಗರಸಭಾ ಚುನಾವಣೆ ನಡೆದು ಇಂದಿಗೆ ಬರೋಬ್ಬರಿ ಎರಡು ವರ್ಷಗಳೇ ಗತಿಸಿದರೂ ನಗರಸಭಾ ಸದಸ್ಯರಿಗೆ ಮಾತ್ರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅಧಿಕಾರ ಲಭಿಸಿಲ್ಲ. ಇದರಿಂದ ನಗರಸಭೆ ಆಡಳಿತ ಹಳಿತಪ್ಪುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ರಾಣೆಬೆನ್ನೂರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳಿಗೆ ಚುನಾವಣಾ ಆಯೋಗ ಕಳೆದ ಎರಡು ವರ್ಷಗಳ ಹಿಂದೆ ಚುನಾವಣೆ ನಡೆಸಿತ್ತು. ಚುನಾವಣೆ ನಡೆದು 24 ತಿಂಗಳಾದರೂ ಚುನಾಯಿತಿ ಪ್ರತಿನಿಧಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ದೊರೆತಿಲ್ಲ. ಇದರಿಂದ ನಗರಸಭೆ 35 ವಾರ್ಡ್ ಗಳ ಆಡಳಿತ ಹಳಿತಪ್ಪುತ್ತಿದೆ ಎನ್ನುವ ದೂರು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.
ಹಿಂದಿನ ಸಮ್ಮಿಶ್ರ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ರಾಜ್ಯದ ಸ್ಥಳೀಯ ಸಂಸ್ಥೆಳಿಗೆ ಮೀಸಲಾತಿ ಪ್ರಕಟಿಸಿತ್ತು. ಕೆಲವರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಹಾಗಾಗಿ ಮೀಸಲಾತಿ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ. ರಾಜ್ಯ ಸರ್ಕಾರ ಸ್ಥಾನಗಳ ಮೀಸಲಾತಿ ಪ್ರಕಟಣೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರೂ ಈ ಸರ್ಕಾರಕ್ಕೆ ಸಮಸ್ಯೆ ಸರಿದೂಗಿಸಿ ಮೀಸಲಾತಿ ಪ್ರಕಟಿಸಲು ಆಗುತ್ತಿಲ್ಲವೆಂದು ನಗರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿಗಳ ಆಡಳಿತ ಮತ್ತು ಚುನಾಯಿತ ಪ್ರತಿನಿಧಿಗಳ ಆಡಳಿತಕ್ಕೂ ವ್ಯತ್ಯಾಸವಿದೆ. ಸಾರ್ವಜನಿಕರು ಮುಕ್ತವಾಗಿ ಜನಪ್ರತಿನಿಧಿಗಳ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಅಧಿಕಾರಿಗಳು ಸಾಮಾನ್ಯರ ಕೈಗೆ ಸಿಗುವುದಿಲ್ಲ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ.